Kalaburagi | ಮಾದಕ ವಸ್ತುಗಳ ವಿರುದ್ಧ ಸಮೂಹ ಹೋರಾಟ ಅಗತ್ಯ: ಪೊಲೀಸ್ ಆಯುಕ್ತ ಶರಣಪ್ಪ

ಕಲಬುರಗಿ: ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಸಾಗಣೆ ಸಮಾಜಕ್ಕೆ ಗಂಭೀರ ಸವಾಲಾಗಿ ಪರಿಣಮಿಸಿದ್ದು, ಇದರ ವಿರುದ್ಧ ಸಮೂಹ ಹೋರಾಟ ಅಗತ್ಯವಾಗಿದೆ ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ. ಹೇಳಿದರು.
ಅಂತರರಾಷ್ಟ್ರೀಯ ಮಾದಕ ವಸ್ತು ದುರ್ಬಳಕೆ ಮತ್ತು ಅಕ್ರಮ ಸಾಗಣೆ ವಿರೋಧಿ ದಿನದ ಅಂಗವಾಗಿ ಕಲಬುರಗಿ ನಗರ ಪೊಲೀಸ್ ಹಾಗೂ ಯುನೈಟೆಡ್ ಆಸ್ಪತ್ರೆ ಸಹಯೋಗದಲ್ಲಿ ಗುರುವಾರ ಸಂಜೆ ನಗರದ ತಿಮ್ಮಾಪುರಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾದಕ ವಸ್ತುಗಳನ್ನು ಸರಬರಾಜು ಮಾಡುವವರ ವಿರುದ್ಧ ಮಾತ್ರವಲ್ಲದೆ, ಅವುಗಳನ್ನು ಸೇವಿಸುವವರ ಮೇಲೆಯೂ ಎನ್‌ಡಿಪಿಎಸ್ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. 2025ರ ಜನವರಿಯಿಂದ ಇದುವರೆಗೆ ನಗರ ವ್ಯಾಪ್ತಿಯಲ್ಲಿ ಮಾದಕ ವಸ್ತು ಸೇವಕರು ಹಾಗೂ ಪೆಡ್ಲರ್‌ಗಳ ವಿರುದ್ಧ ಸುಮಾರು 600 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
‘ಸನ್ಮಿತ್ರ’ ಯೋಜನೆಗೆ ಉತ್ತಮ ಸ್ಪಂದನೆ :
ಮಾದಕ ವ್ಯಸನಕ್ಕೆ ಒಳಗಾದವರು ಹಾಗೂ ಮಾದಕ ವಸ್ತು ಜಾಲದಲ್ಲಿ ಸಿಲುಕಿರುವ ಯುವಕರನ್ನು ಸಮಾಜದ ಮುಖ್ಯವಾಹಿನಿಗೆ ತರಲು ‘ಸನ್ಮಿತ್ರ’ ಎಂಬ ವಿಶೇಷ ಯೋಜನೆ ಜಾರಿಗೊಳಿಸಲಾಗಿದೆ ಎಂದು ಶರಣಪ್ಪ ತಿಳಿಸಿದರು.
ಈ ಯೋಜನೆಯಡಿ ಸಂಬಂಧಿತ ವ್ಯಕ್ತಿಗಳಿಗೆ ಪೊಲೀಸ್ ಸಿಬ್ಬಂದಿಯನ್ನು ಮಾರ್ಗದರ್ಶಕರಾಗಿ ನಿಯೋಜಿಸಿ, ಅವರು ಸಂಪೂರ್ಣವಾಗಿ ಸುಧಾರಿಸುವವರೆಗೆ ನಿರಂತರ ನಿಗಾ ಮತ್ತು ಸಮಾಲೋಚನೆ ನಡೆಸಲಾಗುತ್ತಿದೆ. ಇದರ ಪರಿಣಾಮವಾಗಿ ಈಗಾಗಲೇ ಮಾದಕ ಜಾಲದಲ್ಲಿ ಸಿಲುಕಿದ್ದ 150ಕ್ಕೂ ಹೆಚ್ಚು ಯುವಕರಲ್ಲಿ ಸಕಾರಾತ್ಮಕ ಬದಲಾವಣೆ ಕಂಡುಬಂದಿದೆ ಎಂದು ಹೇಳಿದರು.
18ರಿಂದ 25 ವರ್ಷದ ವಯಸ್ಸು ಜೀವನ ರೂಪಿಸಿಕೊಳ್ಳುವ ಅತ್ಯಂತ ಮಹತ್ವದ ಹಂತವಾಗಿದ್ದು, ಈ ಸಂದರ್ಭದಲ್ಲಿ ಯುವಕರು ಶಿಕ್ಷಣ, ಗುರಿ ಹಾಗೂ ಭವಿಷ್ಯದತ್ತ ಗಮನಹರಿಸಬೇಕು. ಕ್ಷಣಿಕ ಉಲ್ಲಾಸಕ್ಕಾಗಿ ಮಾದಕ ವಸ್ತುಗಳತ್ತ ಆಕರ್ಷಿತರಾಗಬಾರದು ಎಂದು ಕಿವಿಮಾತು ಹೇಳಿದರು.
ಮಾದಕ ವಸ್ತುಗಳ ವಿರುದ್ಧದ ಹೋರಾಟದಲ್ಲಿ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಸಮಾಜಸೇವಕರು ಹಾಗೂ ಸಾರ್ವಜನಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶೈಕ್ಷಣಿಕ ಸಂಸ್ಥೆಗಳು, ವಸತಿ ಪ್ರದೇಶಗಳು ಹಾಗೂ ಸಾರ್ವಜನಿಕ ಸ್ಥಳಗಳ ಸುತ್ತಮುತ್ತ ಮಾದಕ ವಸ್ತುಗಳ ಮಾರಾಟ ಅಥವಾ ಸೇವನೆಗೆ ಸಂಬಂಧಿಸಿದ ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ 112 ಸಹಾಯವಾಣಿಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.
ಮಾದಕ ವ್ಯಸನವು ವ್ಯಕ್ತಿಯ ವಿವೇಕವನ್ನು ಕುಂಠಿತಗೊಳಿಸುವುದಲ್ಲದೆ, ಕುಟುಂಬ ಮತ್ತು ಸಮಾಜದ ಮೇಲೂ ದುಷ್ಪರಿಣಾಮ ಬೀರುತ್ತದೆ. ಯುವಕರು ದೃಢವಾಗಿ ಮಾದಕ ವಸ್ತುಗಳಿಗೆ ‘ಬೇಡ’ ಎಂದು ಹೇಳಬೇಕು ಎಂದು ಸಲಹೆ ನೀಡಿದರು.
ಯುನೈಟೆಡ್ ಆಸ್ಪತ್ರೆಯ ಕನ್ಸಲ್ಟೆಂಟ್ ನ್ಯೂರೋಸರ್ಜನ್ ಹಾಗೂ ಸ್ಪೈನ್ ಸರ್ಜನ್ ಡಾ. ವಿನಯಸಾಗರ ಶರ್ಮಾ ಮಾತನಾಡಿದರು. ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.






