ಕಲಬುರಗಿ| ಅ. 24ರಂದು ನಾಡೋಜ ಡಾ. ಜೆ.ಎಸ್. ಖಂಡೇರಾವ್ ಅವರ ಕಲಾ ಕೊಡುಗೆ ಕುರಿತ ‘ಅಮೂರ್ತ ಧ್ಯಾನ’ ಗ್ರಂಥ ಬಿಡುಗಡೆ

ಕಲಬುರಗಿ: ಕರುನಾಡಿನ ಹೆಮ್ಮೆಯ ಹಿರಿಯ ಚಿತ್ರಕಲಾವಿದ, ನಾಡೋಜ ಡಾ. ಜೆ.ಎಸ್. ಖಂಡೇರಾವ್ ಅವರ ಜೀವನ, ಕಲಾಸಾಧನೆ ಹಾಗೂ ಭಾರತೀಯ ಕಲಾ ಜಗತ್ತಿಗೆ ಅವರು ನೀಡಿದ ಕೊಡುಗೆಯನ್ನು ಪರಿಚಯಿಸುವ ‘ಅಮೂರ್ತ ಧ್ಯಾನ’ ಗ್ರಂಥ ಬಿಡುಗಡೆ ಹಾಗೂ ಚಿತ್ರಕಲಾ ಪ್ರದರ್ಶನವನ್ನು ಅ. 24ರಂದು ಬೆಳಿಗ್ಗೆ 10.30ಕ್ಕೆ ನಗರದ ಸೇಡಂ ರಸ್ತೆಯ ಎಂಆರ್‌ಎಂಸಿ ಸ್ಯಾಕ್ ಕಟ್ಟಡದಲ್ಲಿ ಆಯೋಜಿಸಲಾಗಿದೆ ಎಂದು ನಾಡೋಜ ಡಾ. ಜೆ.ಎಸ್. ಖಂಡೇರಾವ್ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ಖಂಡೇರಾವ್ ಹಾಗೂ ಗ್ರಂಥದ ಲೇಖಕ ಡಾ. ಅಶೋಕ ಶಟಕಾರ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಜಂಟಿಯಾಗಿ ಮಾತನಾಡಿದ ಅವರು, ಈ ಕೃತಿಯು ಪುಸ್ತಕ ಲೋಕದಲ್ಲಿ ವಿಶಿಷ್ಟ ದಾಖಲೆ ಎನಿಸುವುದರ ಜೊತೆಗೆ ಯುವ ಕಲಾವಿದರಿಗೆ ಪ್ರೇರಣೆ ನೀಡಲಿದೆ. ಅಲ್ಲದೆ, ಕಲಾ ಕ್ಷೇತ್ರದ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕ ಕೃತಿಯಾಗಲಿದೆ ಎಂದರು.
ಮೌನಯೋಗಿ ಜಡೆ ಶಾಂತಲಿಂಗೇಶ್ವರ ಮಹಾಸ್ವಾಮಿಗಳು, ಭಾಲ್ಕಿಯ ಹಿರೇಮಠ ಸಂಸ್ಥಾನದ ಸಮಾಧಾನ ಹಾಗೂ ನಾಡೋಜ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಮತ್ತು ಶರಣಬಸವೇಶ್ವರ ದಾಸೋಹ ಸಂಸ್ಥಾನದ ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್. ಅಪ್ಪ ಅವರ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಜರುಗಲಿದೆ.
ಕರ್ನಾಟಕ ಲಲಿತಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ. ಎಂ.ಎಸ್. ಮೂರ್ತಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಸಂಸದ ರಾಧಾಕೃಷ್ಣ ದೊಡ್ಡಮನಿ ‘ಅಮೂರ್ತ ಧ್ಯಾನ’ ಗ್ರಂಥವನ್ನು ಬಿಡುಗಡೆ ಮಾಡಲಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಹಿರಿಯ ಚಿತ್ರಕಲಾವಿದ ಡಾ. ಸಿ. ಚಂದ್ರಶೇಖರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ನಾಡೋಜ ಡಾ. ಜೆ.ಎಸ್. ಖಂಡೇರಾವ್ ಗೌರವ ಉಪಸ್ಥಿತಿ ಇರಲಿದ್ದು, ಪ್ರೊ. ಆರ್.ಕೆ. ಹುಡಗಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಪ್ರೊ. ವಿಕ್ರಮ್ ವಿಸಾಜಿ ಗ್ರಂಥದ ಕುರಿತು ಮಾತನಾಡಲಿದ್ದಾರೆ.
ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಹಾಗೂ ಮುಂಬೈನ ಹಿರಿಯ ಚಿತ್ರಕಲಾವಿದ ಸುಹಾಸ ಬಹುಲ್ಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹಿರಿಯ ವೈದ್ಯ ಸಾಹಿತಿ ಡಾ. ಪಿ.ಎಸ್. ಶಂಕರ, ಹಿರಿಯ ಶಿಲ್ಪಕಲಾವಿದ ವೆಂಕಟಾಚಲಪತಿ ಹಾಗೂ ಖ್ಯಾತ ಚಿತ್ರಕಲಾವಿದ ಡಾ. ವಿ.ಜಿ. ಅಂದಾನಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ನಾಡೋಜ ಡಾ. ಜೆ.ಎಸ್. ಖಂಡೇರಾವ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಪ್ರಭುರಾವ ಬಿ. ಕಾಂತಾ ಹಾಗೂ ಗ್ರಂಥದ ಲೇಖಕ ಡಾ. ಅಶೋಕ ಶಟಕಾರ ಉಪಸ್ಥಿತರಿರಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಗ್ರಂಥದ ಲೇಖಕ ಡಾ. ಅಶೋಕ ಶಟಕಾರ, ಓಂ ಪ್ರಿಂಟರ್ಸ್‌ನ ನೀಲಕಂಠ ಸಿ. ಬಿರಾದಾರ, ರಾಮಲಿಂಗ ಬೆಳಕೋಟೆ ಹಾಗೂ ಹಿರಿಯ ಶಿಲ್ಪಕಲಾವಿದ ಮಾನಯ್ಯ ಬಡಿಗೇರ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು ಎಂದು ಬಸವರಾಜ ಖಂಡೇರಾವ್ ತಿಳಿಸಿದರು.






