Kalaburagi | ಭಿಕ್ಷೆ ಬೇಡಿ ಎಸೆಸೆಲ್ಸಿಯಲ್ಲಿ 529 ಅಂಕ ಪಡೆದ ವಿದ್ಯಾರ್ಥಿನಿಗೆ ಜಿಲ್ಲಾಧಿಕಾರಿಗಳಿಂದ ಸನ್ಮಾನ

ಕಲಬುರಗಿ : ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸುತ್ತಾ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿನಿ ಸುಜಾತಾ ಭೀಮಶಾ ಗೊಲ್ಲರ್ ಅವರನ್ನು ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಅವರು ಸನ್ಮಾನಿಸಿ ಪ್ರೋತ್ಸಾಹಿಸಿದರು.
ಆಳಂದ ತಾಲೂಕಿನ ಮಾದನ ಹಿಪ್ಪರಗಾ ಸರ್ಕಾರಿ ಪಬ್ಲಿಕ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾಗಿರುವ ಸುಜಾತಾ, ಒಟ್ಟು 625 ಅಂಕಗಳಲ್ಲಿ 529 ಅಂಕಗಳನ್ನು ಪಡೆದು ಶೇ.84.64 ಫಲಿತಾಂಶ ಸಾಧಿಸಿದ್ದಾರೆ.
ಸಂಕಷ್ಟಕರ ಪರಿಸ್ಥಿತಿಯಲ್ಲಿಯೇ ಅವರು ಸಾಧಿಸಿದ ಈ ಯಶಸ್ಸು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ವಿದ್ಯಾರ್ಥಿನಿಯ ಸಾಧನೆ ಕುರಿತು 'ವಾರ್ತಾ ಭಾರತಿ' ವಿಶೇಷ ವರದಿ ಪ್ರಕಟಿಸಿತ್ತು. ವರದಿ ಗಮನಿಸಿದ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಅವರು, ಸುಜಾತಾ ಅವರನ್ನು ತಮ್ಮ ಕಚೇರಿಗೆ ಕರೆಯಿಸಿಕೊಂಡು ಸಿಹಿ ತಿನಿಸಿ ಸನ್ಮಾನಿಸಿದರು.
ಅಲ್ಲದೆ, ವಿದ್ಯಾರ್ಥಿನಿಗೆ ನೋಟ್ ಬುಕ್, ಶಾಲಾ ಬ್ಯಾಗ್, ಪೆನ್ ಸೇರಿದಂತೆ ಅಗತ್ಯ ವಿದ್ಯಾ ಸಾಮಗ್ರಿಗಳನ್ನು ವಿತರಿಸಿದರು.
ಸುಜಾತಾ ಅವರ ಸಾಧನೆ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದು ಆಶಿಸಿದ ಜಿಲ್ಲಾಧಿಕಾರಿಗಳು, ಅವರ ಮುಂದಿನ ವಿದ್ಯಾಭ್ಯಾಸ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.






