ಕಲಬುರಗಿ | ʼಲವ್ ಜಿಹಾದ್ʼ ಆರೋಪ ಸುಳ್ಳು ಎಂದು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ ಯುವತಿ

ಕಲಬುರಗಿ : ಇಲ್ಲಿನ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಫಜಲಪುರ ಮೂಲದ ಯುವತಿಯೋರ್ವಳು ಕಾಣೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತಿರುವು ಸಿಕ್ಕಿದ್ದು, ಸ್ವತಃ ಯುವತಿಯೇ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಯುವತಿ ಕಾಣೆಯಾದ ಪ್ರಕರಣಕ್ಕೆ ಆಕೆಯ ಪಾಲಕರು ಹಾಗೂ ಹಿಂದುತ್ವ ಸಂಘಟನೆಯವರು ಕೆಲ ಮಾಧ್ಯಮದವರ ಮುಂದೆ 'ಲವ್ ಜಿಹಾದ್' ಎಂದು ಆರೋಪಿಸಿದ್ದರು. ಈ ಕುರಿತು ಸುದ್ದಿ ತಿಳಿದ ಕಾಣೆಯಾದ ಯುವತಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ, ಸ್ಪಷ್ಟನೆ ನೀಡಿದ್ದಾರೆ.
'ಲವ್ ಜಿಹಾದ್' ಎನ್ನುತ್ತಿರುವ ಆರೋಪ ಸುಳ್ಳು, ʼಹಿಂದುತ್ವ ಸಂಘಟನೆಯವರೇ ನಮ್ಮ ಕುಟುಂಬದವರ ತಲೆ ಕೆಡುಸುತ್ತಿದ್ದಾರೆʼ ಎನ್ನುವ ಮೂಲಕ ಯುವತಿಯು ಆರೋಪವನ್ನು ನಿರಾಕರಣೆ ಮಾಡಿದ್ದಾರೆ.
►ವಿಡಿಯೋದಲ್ಲಿ ಯುವತಿ ಹೇಳಿದ್ದೇನು?:
ʼನಾನು ಕಾಣೆಯಾಗಿಲ್ಲ, ನಾನು ಇಷ್ಟಪಟ್ಟಂತೆ ನನ್ನ ಸ್ವ ಇಚ್ಛೆಯಿಂದ ಪ್ರೀತಿಸಿದ ಹುಡುಗನ ಜೊತೆಗೆ ಮದುವೆಯಾಗಿದ್ದೇನೆ. ನಾನು ಕಾಣೆಯಾಗಿದ್ದೇನೆ ಎಂದು ನನ್ನ ಹುಡುಗನ ಕುಟುಂಬಕ್ಕೆ, ಆತನ ಸ್ನೇಹಿತರಿಗೆ ತೊಂದರೆ ಕೊಡುತ್ತಿದ್ದಾರೆ. ಇದರಲ್ಲಿ ಅವರದ್ದೇನೂ ಕೈವಾಡವಿಲ್ಲ, ಅವರಿಗೆ ತೊಂದರೆ ಕೊಡಬೇಡಿ. ನಾವಿಬ್ಬರೂ ಪ್ರೀತಿಸಿದ ವಿಷಯ ನಮ್ಮ ಮನೆಯವರಿಗೆ ತಿಳಿದಿತ್ತು. ಹಾಗಾಗಿ ನನ್ನನ್ನು ಕಾಲೇಜಿಗೆ ಹೋಗದಂತೆ ತಡೆದಿದ್ದರು. ಅದಾದ ಬಳಿಕ ನನ್ನ ಮನೆಯವರು ನನಗೆ ಪ್ರತಿದಿನ ಹಿಂಸೆ ನೀಡುತ್ತಿದ್ದರು. ಅದನ್ನು ತಡೆಯಲಾಗದೇ ಪ್ರೀತಿಸಿದ ಹುಡುಗನ ಜೊತೆಗೆ ಇರಬೇಕೆಂಬ ಕಾರಣಕ್ಕಾಗಿ ಮದುವೆಯಾಗಿದ್ದೇನೆʼ ಎಂದು ಹೇಳಿದ್ದಾರೆ.
ʼಹಿಂದುತ್ವ ಸಂಘಟನೆಯವರು ಲವ್ ಜಿಹಾದ್ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ನಮ್ಮ ಕುಟುಂಬದವರ ತಲೆ ಕೆಡಿಸುತ್ತಿದ್ದಾರೆ. ನಾವು ಚೆನ್ನಾಗಿದ್ದೇವೆ. ಒಂದು ವೇಳೆ ನಮಗೇನಾದರೂ ತೊಂದರೆ ಆದರೆ, ಹಿಂದುತ್ವ ಸಂಘಟನೆಯವರೇ ಕಾರಣʼ ಎಂದು ಯುವತಿಯು ವೀಡಿಯೊದಲ್ಲಿ ಹೇಳಿದ್ದಾರೆ.
ಕಾಣೆಯಾದ ಯುವತಿ ಮತ್ತು ಆಕೆಯ ಜೊತೆಗಿರುವ ಯುವಕನ ಪತ್ತೆಗೆ ಹುಡುಕಾಟ ನಡೆಯುತ್ತಿದೆ, ಅವರನ್ನು ಕರೆತಂದ ಬಳಿಕ ಇಬ್ಬರನ್ನು ವಿಚಾರಣೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಲಬುರಗಿ ನಗರ ಪೊಲೀಸ್ ಕಮಿಷನರ್ ಡಾ.ಶರಣಪ್ಪ ಎಸ್.ಡಿ. ತಿಳಿಸಿದ್ದಾರೆ.







