ಕಲಬುರಗಿ | ಪತ್ನಿಯ ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಿದ ಆರೋಪಿಯ ಬಂಧನ

ಕಲಬುರಗಿ: ವ್ಯಕ್ತಿಯೊರ್ವ ತನ್ನ ಪತ್ನಿಯನ್ನು ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ ಘಟನೆ ಸೇಡಂ ತಾಲೂಕಿನ ಯಾನಾಗುಂದಿ ಗ್ರಾಮದಲ್ಲಿ ಪೊಲೀಸರ ತನಿಖೆಯಲ್ಲಿ ಬಯಲಿಗೆ ಬಂದಿದೆ.
ಪತ್ನಿ ರೇಣುಕಾ (ಲಕ್ಷ್ಮೀ)ಯನ್ನು ಕೊಲೆ ಮಾಡಿದ ಆರೋಪದಲ್ಲಿ ಪತಿ ಭೀಮಶಪ್ಪ ದೊಡ್ಮನಿಯನ್ನು ಮುಧೋಳ ಠಾಣೆಯ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.
ಭೀಮಶಪ್ಪ ಅನೈತಿಕ ಸಂಬಂಧ ಹೊಂದಿದ್ದಾನೆಂಬ ಕಾರಣಕ್ಕೆ ಪತ್ನಿ ರೇಣುಕಾ ಪದೇಪದೇ ಗಂಡನೊಂದಿಗೆ ಜಗಳವಾಡುತ್ತಿದ್ದಳು. ಇತ್ತೀಚೆಗೆ ಗಂಡನ ಮೊಬೈಲ್‌ಗೆ ಮಹಿಳೆಯೊಬ್ಬಳ ಕರೆ ಬಂದಿದ್ದು, ಅದನ್ನು ರೇಣುಕಾ ಅವರು ಸ್ವೀಕರಿಸಿದ್ದರು. ಕರೆ ಮಾಡಿದವರು ಯಾರು ಎಂದು ಪತ್ನಿ ವಿಚಾರಿಸಿದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ತೀವ್ರ ವಾಗ್ವಾದ ಉಂಟಾಗಿದೆ.
ಕೋಪಗೊಂಡ ಭೀಮಶಪ್ಪ, ಸೆ.4ರಂದು ಪತ್ನಿಯನ್ನು ಹೊಲಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ. ನಂತರ, ಪತ್ನಿ ಗಿಡಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಂತೆಯೇ ಬಿಂಬಿಸುವ ಯತ್ನ ನಡೆಸಿದ್ದಾನೆ.
ರೇಣುಕಾಳ ಪಾಲಕರಿಗೆ ಸಂಶಯ ಉಂಟಾಗಿದ್ದು, ಅವರು ಮುಧೋಳ ಠಾಣೆಗೆ ದೂರು ನೀಡಿದ್ದು, ದೂರು ಆಧಾರಿಸಿ ಪೊಲೀಸರು ತನಿಖೆ ಕೈಗೊಂಡಾದ ಭೀಮಶಪ್ಪ ಕೊಲೆ ಮಾಡಿರುವ ಬಗ್ಗೆ ಸುಳಿವು ಸಿಕ್ಕಿದ್ದು, ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.





