ಕಲಬುರಗಿ | ಪೊಕ್ಸೊ ಪ್ರಕರಣದ ಆರೋಪಿಗೆ 20 ವರ್ಷ ಜೈಲು ಶಿಕ್ಷೆ

ಕಲಬುರಗಿ: 17 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 20 ವರ್ಷ ಜೈಲು ಹಾಗೂ 2.50 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.
ಕಾಳಗಿ ತಾಲೂಕಿನ ಅರಣಕಲ್ ಗ್ರಾಮಸ್ಥ ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಪ್ಪ ಕಲಗುರ್ತಿ ಶಿಕ್ಷೆಗೆ ಒಳಗಾದ ವ್ಯಕ್ತಿ.
ಶಿಕ್ಷೆಗೆ ಒಳಗಾದ ಮಲ್ಲಪ್ಪ, ಬಾಲಕಿಯೋರ್ವಳನ್ನು ಕಲಬುರಗಿ ತಾಲೂಕಿನ ಗ್ರಾಮವೊಂದರಿಂದ ಪುಸಲಾಯಿಸಿ ಬೆಂಗಳೂರಿಗೆ ಕರೆದೊಯ್ದು, ಅಲ್ಲಿ ಒಂದು ತಿಂಗಳ ಕಾಲ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಬಗ್ಗೆ ಕಲಬುರಗಿಯ ಸಬರ್ಬನ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಪೊಕ್ಸೋ ಹಾಗೂ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಎಸಿಪಿ ಗೀತಾ ಬೆನಹಾಳ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ (ಪೋಕ್ಸ್) ಮುಹಮ್ಮದ್ ಮುಜೀರುಲ್ಲಾ ಸಿ.ಜಿ., ಪೊಕ್ಸೊ ಕಾಯ್ದೆಗಳಿಗೆ ಸಂಬಂಧಿಸಿದಂತೆ ಆರೋಪ ಸಾಬೀತಾಗಿರುವ ಕಾರಣ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ 2.50 ಲಕ್ಷ ದಂಡ ವಿಧಿಸಿ ಆದೇಶಿಸಿದ್ದಾರೆ. ನೊಂದ ಬಾಲಕಿಗೆ ಕಾನೂನು ಪ್ರಾಧಿಕಾರದಿಂದ 4 ಲಕ್ಷ ರೂ. ಪರಿಹಾರ ನೀಡುವಂತೆಯೂ ಆದೇಶದಲ್ಲಿ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ(ಪೊಕ್ಸೋ) ಶಾಂತವೀರ ಬಿ.ತುಪ್ಪದ್ ವಾದ ಮಂಡಿಸಿದ್ದರು.







