ಕಲಬುರಗಿ | ಸಾಲ ಮರು ಪಾವತಿಸಿದರೂ ಕಿರುಕುಳ ಆರೋಪ : ಯುವಕ ಆತ್ಮಹತ್ಯೆ

ಚಂದ್ರಕಾಂತ
ಕಲಬುರಗಿ : ಸಾಲ ಕೊಟ್ಟು ವಾಪಸ್ ಪಡೆದ ಬಳಿಕವೂ ಮತ್ತೆ ಹಣ ನೀಡುವಂತೆ ಪೀಡಿಸುತ್ತಿದ್ದವನ ಹೋಟೆಲ್ ಎದುರುಗಡೆಯೇ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಗರದ ಬೇಳೂರು ಕ್ರಾಸ್ ಸಮೀಪ ನಡೆದಿದೆ.
ಬೇಲೂರ ಕ್ರಾಸ್ ಸಮೀಪದ ಸಿದ್ಧಾರೂಢ ಕಾಲೋನಿಯ ನಿವಾಸಿ ಚಂದ್ರಕಾಂತ (30) ಮೃತವ್ಯಕ್ತಿ ಎಂದು ಗುರುತಿಸಲಾಗಿದೆ.
ಶರಣು ಪಾಟೀಲ್, ಮಂದಾಕಿನಿ ಪಾಟೀಲ್, ನೀಲಕಂಠ ನಾಗಣ್ಣ ಮತ್ತು ಭೀಮಣ್ಣ ನಾಗಣ್ಣ ವಿರುದ್ಧ ಕಿರುಕುಳ ಆರೋಪದಲ್ಲಿ ಇಲ್ಲಿನ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈಗಾಗಲೇ ಮೊದಲ ಆರೋಪಿ ಶರಣು ಪಾಟೀಲ್ ನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶರಣ ಪಾಟೀಲ್ ಅವರಿಂದ ಸಾಲ ಪಡೆದು ವಾಪಸ್ ಕೊಟ್ಟಿದ್ದರೂ ಇನ್ನು 50 ಸಾವಿರ ರೂ. ಬಾಕಿ ಇದೆ ಎಂದು ಪೀಡಿಸುತ್ತಿದ್ದರು, ಇದರಿಂದ ನೊಂದು, ತನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿ ಮೃತನ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದೀಗ ಪೋಷಕರ ದೂರಿನನ್ವಯ ಮೊದಲ ಆರೋಪಿಯನ್ನು ಬಂಧಿಸಿದ್ದು, ಇನ್ನುಳಿದ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.