ಕಲಬುರಗಿ | ಅನೈತಿಕ ಸಂಬಂಧ ಆರೋಪ : ಪತ್ನಿಯನ್ನು ಕೊಲೆಗೈದ ಪತಿಯ ಬಂಧನ

ಸಾಂದರ್ಭಿಕ ಚಿತ್ರ
ಕಲಬುರಗಿ : ಅನೈತಿಕ ಸಂಬಂಧ ಶಂಕೆ ವ್ಯಕ್ತಪಡಿಸಿ ಪತ್ನಿಯನ್ನು ಹತ್ಯೆಗೈದಿರುವ ಘಟನೆ ಇಲ್ಲಿನ ರಾಜಾಪುರ ಬಡಾವಣೆಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ಮೃತರನ್ನು ರಾಜಾಪೂರ ಬಡಾವಣೆಯ ನಿವಾಸಿ ಆಶಾರಾಣಿ (25) ಹಾಗೂ ಆರೋಪಿಯನ್ನು ಪತಿ ಸಿದ್ದರಾಮ ಮೈಲಾಪುರೆ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಡಾ.ಶರಣಪ್ಪ ಎಸ್.ಡಿ ಹೇಳಿದ್ದಾರೆ.
ಆಶಾರಾಣಿ ಹಾಗೂ ಸಿದ್ದರಾಮ ಕಳೆದ 14 ವರ್ಷಗಳ ಹಿಂದೆ ವಿವಾಹವಾಗಿದ್ದು, ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇಬ್ಬರ ನಡುವೆ ಅನೇಕ ವಿಚಾರಗಳಿಗೆ ಪದೇ ಪದೇ ಜಗಳವಾಗುತ್ತಿದ್ದು, ರವಿವಾರ ರಾತ್ರಿಯೂ ಅನೈತಿಕ ಸಂಬಂಧ ವಿಷಯ ಇಬ್ಬರ ನಡುವೆ ಜಗಳವಾಗಿದ್ದು, ಇದಕ್ಕೆ ಕೋಪಗೊಂಡ ಸಿದ್ದರಾಮ ಸೋಮವಾರ ಬೆಳಗ್ಗೆ ಮನೆಯಲ್ಲಿ ಮಲಗಿದ್ದ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಆಶಾರಾಣಿಯನ್ನು ಹತ್ಯೆ ಮಾಡಿದ್ದ ಕುರಿತು ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ವಿಶ್ವವಿದ್ಯಾಲಯದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಕೊಲೆ ಮಾಡಿದ ಆರೋಪಿ ಸಿದ್ದರಾಮನನ್ನು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.





