ಕಲಬುರಗಿ | ಸಂಪೂರ್ಣತಾ ಅಭಿಯಾನ ಮೂಲಕ ಆರೋಗ್ಯ, ಶಿಕ್ಷಣ ಕೃಷಿಯಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಿ: ಬಿ.ಫೌಝಿಯಾ ತರನ್ನುಮ್

ಕಲಬುರಗಿ: ನೀತಿ ಆಯೋಗ ಗುರುತಿಸಿರುವ ಜಿಲ್ಲೆಯ ಆಫಜಲಪುರ, ಕಾಳಗಿ ಹಾಗೂ ಶಹಾಬಾದ್ ತಾಲೂಕುಗಳಲ್ಲಿ ‘ಸಂಪೂರ್ಣತಾ ಅಭಿಯಾನ 2.0’ ಮೂಲಕ ಆರೋಗ್ಯ, ಅಪೌಷ್ಟಿಕತೆ ನಿವಾರಣೆ, ಶಿಕ್ಷಣ ಹಾಗೂ ಕೃಷಿ ಕ್ಷೇತ್ರಗಳಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸುವುದು ಜಿಲ್ಲಾಡಳಿತದ ಗುರಿಯಾಗಿದೆ. ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಬಿ. ಫೌಝಿಯಾ ತರನ್ನುಮ್ ಅಧಿಕಾರಿಗಳಿಗೆ ಸೂಚಿಸಿದರು.
ಸೋಮವಾರ ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ನೀತಿ ಆಯೋಗದ ಮಹತ್ವಾಕಾಂಕ್ಷಿ ಕಾರ್ಯಕ್ರಮ ‘ಸಂಪೂರ್ಣತಾ ಅಭಿಯಾನ 2.0’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೂರು ಆಕಾಂಕ್ಷಿ ಬ್ಲಾಕ್‌ಗಳಲ್ಲಿ ಯೋಜನೆಗಳು ಯಶಸ್ವಿಯಾಗಲು ವಿಭಾಗಗಳ ನಡುವಿನ ಸಮನ್ವಯ ಅತ್ಯಗತ್ಯ ಎಂದು ಹೇಳಿದರು.
ಕ್ಷೇತ್ರಮಟ್ಟದಲ್ಲಿ ನಿರಂತರ ಮೇಲ್ವಿಚಾರಣೆ ಅಗತ್ಯವಿದ್ದು, ಪ್ರಮುಖವಾಗಿ ಜನರ ಸಹಭಾಗಿತ್ವ ಇಲ್ಲದೆ ಗುರಿ ಸಾಧನೆ ಸಾಧ್ಯವಿಲ್ಲ. ಯಾವುದೇ ಅರ್ಹ ಫಲಾನುಭವಿಯೂ ಸರ್ಕಾರದ ಯೋಜನೆಗಳು ಹಾಗೂ ಸೌಲಭ್ಯಗಳಿಂದ ಹೊರಗುಳಿಯದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಅವರು ಸೂಚಿಸಿದರು.
ಕಾಳಗಿ ನಮಗೆ ಪ್ರೇರಣೆ :
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವಾರ್ ಸಿಂಗ್ ಮಾತನಾಡಿ, ನೀತಿ ಆಯೋಗದ ಸಂಪೂರ್ಣತಾ ಅಭಿಯಾನ 1.0ರಲ್ಲಿ ಕಾಳಗಿ ಆಕಾಂಕ್ಷಿ ಬ್ಲಾಕ್ 6 ಸೂಚಕಗಳಲ್ಲಿ 5 ಸೂಚಕಗಳಲ್ಲಿ ಶೇ.100 ಸಾಧನೆ ಮಾಡಿ ಬೆಳ್ಳಿ ಪದಕ ಪಡೆದಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯ ಎಂದು ಹೇಳಿದರು. ಇದೇ ಸಾಧನೆ ಸಂಪೂರ್ಣತಾ ಅಭಿಯಾನ 2.0ಕ್ಕೆ ಪ್ರೇರಣೆಯಾಗಿದೆ ಎಂದರು.
ಸಂಪೂರ್ಣತಾ ಅಭಿಯಾನ 2.0ರಲ್ಲಿ ಶೇ.100 ಗುರಿ ಸಾಧನೆಗಾಗಿ ಎಲ್ಲ ಇಲಾಖೆಗಳು ಸಂಕಲ್ಪದೊಂದಿಗೆ ಕೆಲಸ ಮಾಡಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಕಾರ್ಯಯೋಜನೆ ರೂಪಿಸಬೇಕು, ಪ್ರತಿ ವಾರ ಪರಿಶೀಲನೆ, ಕ್ಷೇತ್ರ ಭೇಟಿ ಹಾಗೂ ನೈಜ ಫಲಿತಾಂಶ ಆಧಾರಿತ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು. ದಾಖಲೆಗಿಂತ ನೆಲಮಟ್ಟದ ಸಾಧನೆ ಮುಖ್ಯ ಎಂಬುದನ್ನು ಅವರು ಸ್ಪಷ್ಟಪಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಜಗದೇವಪ್ಪ, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ, ಆಕಾಂಕ್ಷಿ ಬ್ಲಾಕ್ ಫೆಲೋ ಶಿವರಾಜ ಹೊಳ್ಕರ್ ಸೇರಿದಂತೆ ಕಾಳಗಿ, ಆಫಜಲಪೂರ ಹಾಗೂ ಶಹಾಬಾದ್ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಸಿಡಿಪಿಓಗಳು, ಸಹಾಯಕ ಕೃಷಿ ನಿರ್ದೇಶಕರು, ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.







