Kalaburagi | ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಗುತ್ತೇದಾರ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಕಲಬುರಗಿ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಜೀವನ ಜ್ಯೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಮಾತೋಶ್ರೀ ಅಂಬವ್ವಾ ರುಕ್ಮಯ್ಯ ಗುತ್ತೇದಾರ ಸ್ಮಾರಕ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಹಲವರು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಕಾಲೇಜಿನ ವಿದ್ಯಾರ್ಥಿಗಳು ಅಥ್ಲೆಟಿಕ್ಸ್‌ನ ವಿವಿಧ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕಾಲೇಜಿನ ಪವನ ಶ್ಯಾಮರಾವ ಅವರು 1500 ಮೀಟರ್ ಓಟದಲ್ಲಿ ಪ್ರಥಮ ಹಾಗೂ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಗೇಮು ವಿಜಯಕುಮಾರ 400 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ, ಪ್ರವೀಣ ಮಲ್ಲಿನಾಥ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಅದೇ ರೀತಿ ಬಸವರಾಜ ಶಿವಾನಂದ ಉದ್ದ ಜಿಗಿತದಲ್ಲಿ ದ್ವಿತೀಯ, ವಿಜಯಲಕ್ಷ್ಮೀ ರಾಜು 200 ಮೀಟರ್ ಓಟದಲ್ಲಿ ದ್ವಿತೀಯ, ಲಕ್ಷ್ಮೀ ಅಂಬಾರಾಯ ಚಕ್ರ ಎಸೆತದಲ್ಲಿ ದ್ವಿತೀಯ ಹಾಗೂ ಪ್ರದೀಪ ಭೀಮಾಶಂಕರ 3000 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಬಸವರಾಜ ಹಣಮಂತ 100 ಮೀಟರ್ ಓಟದಲ್ಲಿ ತೃತೀಯ ಹಾಗೂ ಲಕ್ಷ್ಮೀಪುತ್ರ ಯಲ್ಲಾಲಿಂಗ ಭಲ್ಲೆ ಎಸೆತದಲ್ಲಿ ತೃತೀಯ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಜೀವನ ಜ್ಯೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸುಭಾಷ್ ಗುತ್ತೇದಾರ, ಕಾರ್ಯದರ್ಶಿ ಹರ್ಷಾ ಗುತ್ತೇದಾರ, ಆಡಳಿತಾಧಿಕಾರಿ ಹಣಮಂತ ಶೇರಿ, ಪ್ರಾಚಾರ್ಯ ಡಾ. ಅಪ್ಪಾಸಾಬ ಬಿರಾದಾರ, ವಿಜ್ಞಾನ ವಿಭಾಗದ ಮುಖ್ಯಸ್ಥೆ ಜ್ಯೋತಿ ವಿಶಾಖ್ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ. ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿಯೂ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲಿ ಎಂದು ಶುಭ ಹಾರೈಸಿದ್ದಾರೆ.






