ಪ್ರಧಾನಿ ಮೋದಿ ಎಂದಾದರೂ ರಾಷ್ಟ್ರ ಧ್ವಜಾರೋಹಣ ಮಾಡುವಾಗ ಭಾವುಕರಾಗಿದ್ದಾರಾ?: ನಟ ಪ್ರಕಾಶ್ ರಾಜ್ ಪ್ರಶ್ನೆ

ಕಲಬುರಗಿ: ಇತ್ತೀಚೆಗೆ ಧಾರ್ಮಿಕ ಬಾವುಟ ಏರಿಸುವಾಗ ಭಾವುಕರಾದ ಪ್ರಧಾನಿ ನರೇಂದ್ರ ಮೋದಿ ಎಂದಾದರೂ ರಾಷ್ಟ್ರ ಧ್ವಜಾರೋಹಣ ಮಾಡುವಾಗ ಭಾವುಕರಾಗಿದ್ದಾರಾ? ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಪ್ರಶ್ನಿಸಿದ್ದಾರೆ.
ನಗರದ ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ರವಿವಾರ ಈದಿನ.ಕಾಮ್ ಆಯೋಜಿಸಿದ "ಎರಡನೆಯ ಓದುಗರ ಸಮಾವೇಶ" ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಪ್ರಕಾಶ್ ರಾಜ್, ದೇಶದಲ್ಲಿ ಸುಳ್ಳುಗಳ ಮಹಾಪೂರವೇ ನಡೆಯುತ್ತಿದೆ. ಮಾಧ್ಯಮ ಎಂದರೆ ಸುಳ್ಳುಗಳಾಗಿವೆ. ಮಾತೆತ್ತಿದರೆ ದೇಶಭಕ್ತಿ ಎಂದು ಹೇಳಿಕೊಂಡು ತಿರುಗುವ ಪ್ರಧಾನಿಗಳು ಕೂಡ ಸುಳ್ಳಾಗಿದ್ದಾರೆ ಎಂದು ಹೇಳಿದರು.
ನ.25ರಂದು ಆರೆಸ್ಸೆಸ್ ನವರ ಜೊತೆಗಿದ್ದು, ಧ್ವಜಾರೋಹಣ ಮಾಡುವಾಗ ಪ್ರಧಾನಿಗಳ ಕೈಗಳು ನಡುಗುತ್ತಿದ್ದವು. ಇದನ್ನು ಗಮನಿಸಿದ ನನ್ನ ಗೆಳೆಯರೊಬ್ಬರು, ನಿಮ್ಮ ಗೆಳೆಯರಿಗೆ ಆರೋಗ್ಯ ಸರಿಯಿಲ್ಲ, ಒಂದು ಟ್ವೀಟ್ ಆದರೂ ಮಾಡಿ ಎಂದು ಸಲಹೆ ನೀಡಿದ್ದರು. ನಾನು ಅದನ್ನು ನೋಡಿ ಪ್ರಧಾನಿಗಳಿಗೆ ದೇವರ ಮೇಲೆರುವ ನಂಬಿಕೆ ಎಂತಹದ್ದು ಎಂದು ನಾನು ಭಾವಿಸಿದೆ. ಭಾರತದ ಧ್ವಜದ ಮೇಲೆ ಇಷ್ಟೊಂದು ಭಾವುಕತೆ ಎಂದಾದರೂ ಕಂಡಿದ್ದೇನಾ ಎಂದು ಯೋಚಿಸಿದ್ದೆ ಎಂದು ಪ್ರಕಾಶ್ ರಾಜ್ ಹೇಳಿದರು.
ಈ ವೇಳೆ ಆಳಂದ ಶಾಸಕ ಬಿ.ಆರ್.ಪಾಟೀಲ್, ಹೋರಾಟಗಾರ ಮರಿಯಪ್ಪ ಹಳ್ಳಿ, ಡಾ.ಫಾರೂಕ್ ಮನೂರ್, ಆರ್.ಕೆ.ಹುಡಗಿ, ಲಕ್ಷ್ಮಣ್ ದಸ್ತಿ, ಅರ್ಜುನ್ ಭದ್ರೆ, ಡಿ.ಉಮಾಪತಿ, ಡಾ.ರಝಾಕ್ ಉಸ್ತಾದ್, ನಾಗೇಶ್ ಹರಳಯ್ಯ, ಭೀಮರೆಡ್ಡಿ ಸಿಂಧನಕೇರಾ, ಶಿವಾನಂದ ಪಾಟೀಲ್, ಅಬ್ದುಲ್ ಖಾದರ್, ಮಹಾಂತೇಶ್ ಕೌಲಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.







