ಕಲಬುರಗಿ| ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಪ್ರವೇಶಾತಿ ಆರಂಭ; ಅರ್ಜಿ ಸಲ್ಲಿಕೆಗೆ ಜ.14 ಕೊನೆ ದಿನ: ಪ್ರೊ. ಬಟ್ಟು ಸತ್ಯನಾರಾಯಣ

ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ 2026ನೇ ಶೈಕ್ಷಣಿಕ ಸಾಲಿನಲ್ಲಿ ಬಿ.ಎಡ್ ಕೋರ್ಸ್ ಒಳಗೊಂಡoತೆ 35 ಸ್ನಾತಕೋತ್ತರ ಕೋರ್ಸ್ ಗಳಲ್ಲಿ ವ್ಯಾಸಂಗಕ್ಕೆ ಪ್ರವೇಶಾತಿ ಪ್ರಕ್ರಿಯೆ ಆರಂಭಗೊಂಡಿದ್ದು, ನ್ಯಾಷನಲ್ ಟೆಸ್ಟ್ ಏಜೆನ್ಸಿ ನಡೆಸುವ ಪ್ರವೇಶ ಪರೀಕ್ಷೆಗೆ ಆನ್‌ಲೈನ್ ಮೂಲಕ (https://exams.nta.nic.in/cuet-pg/) ಅರ್ಜಿ ಸಲಿಸಲು 2026ರ ಜ.14 ಕೊನೆ ದಿನವಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಡಿ.14 ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಜ.14ರೊಳಗೆ ಆನ್‌ಲೈನ್ ಮೂಲಕವೇ ಶುಲ್ಕ ಪಾವತಿಯೊಂದಿಗೆ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ. ಅರ್ಜಿಯಲ್ಲಿ ಏನಾದರೂ ತಿದ್ದುಪಡಿ ಮಾಡುವುದಿದ್ದಲ್ಲಿ ಜ.18 ರಿಂದ 20 ವರೆಗೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆ ಇದಾಗಿದ್ದು, ಭಾಷಾ ಪ್ರಶ್ನೆ ಪತ್ರಿಕೆಗಳು ಹೊರತು ಪಡಿಸಿ ಉಳಿದ ಎಲ್ಲಾ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿರಲಿವೆ ಎಂದರು.
ಪರೀಕ್ಷೆ ನಡೆಯುವ ಸ್ಥಳ, ದಿನಾಂಕ, ಪ್ರವೇಶ ಕಾರ್ಡ್, ಫಲಿತಾಂಶ ಎಲ್ಲವು ಎನ್.ಟಿ.ಎ ವೆಬ್‌ಸೈಟ್ ಮೂಲಕವೇ ತಿಳಿಸಲಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು https://nta.ac.in/, https://exams.nta.nic.in/cuet-pg/ ವೆಬ್‌ಸೈಟ್ ನಿರಂತರವಾಗಿ ವೀಕ್ಷಿಸಬೇಕು ಮತ್ತು ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿನ ಪಿ.ಜಿ.ಕೋರ್ಸ್ ವಿವರಗಳನ್ನು ವಿ.ವಿ.ಯ ಅಂತರ್ಜಾಲದಿoದ ಪಡೆಯಬಹುದಾಗಿದೆ ಎಂದು ಪ್ರವೇಶ ಪರೀಕ್ಷೆಯ ವಿವಿಧ ಹಂತಗಳ ಕುರಿತು ಕುಲಪತಿಗಳು ಮಾಹಿತಿ ನೀಡಿದರು.
ಪ್ರಸಕ್ತ ಪದವಿಯ 5ನೇ ಮತ್ತು 6ನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಮತ್ತು ಸ್ನಾತಕ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಪ್ರವೇಶಾತಿ ಪರೀಕ್ಷೆ ಬರೆಯಲು ಅರ್ಹರಿದ್ದಾರೆ. ಮುಂದಿನ ವರ್ಷದ ಮಾರ್ಚ್ ನಲ್ಲಿ ಪ್ರವೇಶ ಪರೀಕ್ಷೆ ನಡೆದು ಏಪ್ರಿಲ್-ಮೇನಲ್ಲಿ ಪರೀಕ್ಷಾ ಫಲಿತಾಂಶ ಪ್ರಕಟವಾಗಲಿದೆ. ತದನಂತರ ಜೂನ್-ಜುಲೈ ಮಾಹೆಯಲ್ಲಿ ಪ್ರವೇಶಾತಿ ಪ್ರಕ್ರಿಯೆ ನಡೆಯಲಿದೆ. ಹೀಗಾಗಿ ಪದವಿಯ ಅಂತಿಮ ವರ್ಷದಲ್ಲಿ ಓದುತ್ತಿರುವ ಅಭ್ಯರ್ಥಿಗಳು ಸಹ ಎನ್.ಎ.ಟಿ. ನಡೆಸುವ ಪ್ರವೇಶ ಪರೀಕ್ಷೆ ಬರೆಯಬಹುದಾಗಿದೆ ಎಂದು ಅವರು ತಿಳಿಸಿದರು.
ದೇಶದಲ್ಲಿನ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಪ್ರವೇಶಾತಿ ಪಡೆಯಬೇಕಾದರೆ ಮೊದಲು ನ್ಯಾಷನಲ್ ಟೆಸ್ಟ್ ಏಜೆನ್ಸಿ ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದು ಕಡ್ಡಾಯವಾಗಿದೆ. ಎನ್.ಎ.ಟಿ. ಫಲಿತಾಂಶ ಪ್ರಕಟಿಸಿದ ನಂತರ ವಿದ್ಯಾರ್ಥಿ ಬಯಸಿದಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಪ್ರವೇಶಕ್ಕೆ www.cuk.ac.in ಮೂಲಕವೇ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಸಿ.ಯು.ಇ.ಟಿ. ಪಿ.ಜಿ-2026 ರಲ್ಲಿ ಗಳಿಸಿದ ಅಂಕ ಮತ್ತು ವಿ.ವಿ.ಯಲ್ಲಿ ಜಾರಿಯಲ್ಲಿರುವ ಮೀಸಲಾತಿ ಮತ್ತು ರೋಸ್ಟರ್ ನಿಯಮದಂತೆ ಪ್ರವೇಶಾತಿ ಕಲ್ಪಿಸಲಾಗುತ್ತದೆ. ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ 371ಜೆ ಅನ್ವಯ ಶೇ.೮ರಷ್ಟು ಪ್ರವೇಶಾತಿ ಮೀಸಲಾತಿ ಇದ್ದು, ಈ ಭಾಗದ ವಿದ್ಯಾರ್ಥಿಗಳು ಇದರ ಪ್ರಯೋಜನೆ ಪಡೆಯುವಂತೆ ಪ್ರೊ. ಬಟ್ಟು ಸತ್ಯನಾರಾಯಣ ಮನವಿ ಮಾಡಿದರು.
CUET (PG)-2026ಗೆ ಅರ್ಜಿ ಸಲ್ಲಿಸಲು ಯಾವುದೇ ಅಭ್ಯರ್ಥಿಯು ತೊಂದರೆಯನ್ನು ಎದುರಿಸಿದಲ್ಲಿ ದೂ.ಸಂ. 011 40759000 / 011 69227700 ಅನ್ನು ಸಂಪರ್ಕಿಸಬಹುದು ಅಥವಾ helpdesk-cuetpg@nta.ac.in ನಲ್ಲಿ ಇ-ಮೇಲ್ ಮೂಲಕ ಸಹ ಸಂವಹನ ಮಾಡಬಹುದು. ಅಭ್ಯರ್ಥಿಗಳು ಪರೀಕ್ಷೆಗೆ ಸಂಬಂಧಿಸಿದ ಅಪಡೇಟ್ ಮಾಹಿತಿಗೆ www.nta.ac.in ಮತ್ತು https://exams.nta.nic.in/cuet-pg/ ವೀಕ್ಷಿಸಬೇಕು. ಪ್ರವೇಶ ಪರೀಕ್ಷೆಯು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ನಡೆಯುವುದರಿಂದ ಭವಿಷ್ಯದ ಸಂವಹನಕ್ಕಾಗಿ ಅಭ್ಯರ್ಥಿಗಳು ಅರ್ಜಿಯಲ್ಲಿ ಸರಿಯಾದ ಇಮೇಲ್ ವಿಳಾಸ, ಮೊಬೈಲ್ ಸಂಖ್ಯೆ ನಮೂದಿಸಬೇಕು ಎಂದು ಪ್ರೊ. ಬಟ್ಟು ಸತ್ಯರಾಯಣ ಮನವಿ ಮಾಡಿದ್ದಾರೆ.
ಸಿ.ಯು.ಕೆ.ಯಲ್ಲಿ ಲಭ್ಯವಿರುವ ಕೋರ್ಸ್ ಗಳು :
ಎಂ.ಎ (ಇಂಗ್ಲೀಷ್), (ಹಿಂದಿ), (ಕನ್ನಡ), (ಭಾಷಾಶಾಸ್ತ್ರ), (ಜಾನಪದ ಮತ್ತು ಬುಡಕಟ್ಟು ಅಧ್ಯಯನ), (ಅರ್ಥಶಾಸ್ತ್ರ), (ಇತಿಹಾಸ), (ಸಾರ್ವಜನಿಕ ಆಡಳಿತ), (ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ) ಹಾಗೂ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ. ಎಂ.ಎಸ್ಸಿ. (ಗಣಿತ), (ಭೌತಶಾಸ್ತ್ರ), (ರಸಾಯನಶಾಸ್ತ್ರ), (ಭೂಗೋಳ), (ಭೂವಿಜ್ಞಾನ), (ಸಸ್ಯಶಾಸ್ತ್ರ), (ಪ್ರಾಣಿಶಾಸ್ತ್ರ) ಹಾಗೂ (ಅಂಕಿ ಅಂಶಗಳು ಮತ್ತು ದತ್ತಾಂಶ ವಿಶ್ಲೇಷಣೆ). ಎಂ.ಎಸ್ಸಿ. ಮನೋವಿಜ್ಞಾನ, ಜೆನೆಟಿಕ್ಸ್ ಮತ್ತು ಜೀನೋಮಿಕ್, ಎಂ.ಕಾo (ಬ್ಯಾಂಕಿಂಗ್ ಮತ್ತು ಹಣಕಾಸು ತಂತ್ರಜ್ಞಾನ), ಎಂ.ಕಾಂ, ಎಂ.ಬಿ.ಎ, ಎಂ.ಬಿ.ಎ (ಪ್ರವಾಸೋದ್ಯಮ ಮತ್ತು ಪ್ರಯಾಣ ನಿರ್ವಹಣೆ), ಸಮಾಜಕಾರ್ಯ, ಎಂ.ಸಿ.ಎ, ಎಲ್.ಎಲ್.ಎಂ, ಬಿ.ಎಡ್, ಎಂ.ಎಡ್, ಎಂ.ಟೆಕ್ ಪವರ್ & ಎನರ್ಜಿ ಇಂಜಿನೀಯರಿಂಗ್, ಎಂ.ಟೆಕ್ ಆರ್.ಎಫ್. & ಮೈಕ್ರೋವೇವ್ ಇಂಜಿನೀಯರಿoಗ್, ಎಂ.ಟೆಕ್ ಎ.ಐ ಮತ್ತು ಎಂ.ಎಲ್., ಎಂಪಿಎ. ಹಿಂದೂಸ್ತಾನಿ ಗಾಯನ, ಎಂ.ಪಿ.ಎ. ಇನ್ಸ್ಟಾಲ್ ಮೆಂಟಲ್ (ಹಿಂದೂಸ್ತಾನಿ ತಬಲಾ) ಹಾಗೂ ಮಾಸ್ಟರ್ ಆಫ್ ವಿಜುವಲ್ ಆರ್ಟ್ಸ್.
ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಕೋಟಾ ಸಾಯಿಕೃಷ್ಣ, ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಗಣಪತಿ ಬಿ. ಸಿನ್ನೂರ ಉಪಸ್ಥಿತರಿದ್ದರು.







