Kalaburagi | ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಏರಿಕೆ ವಿರೋಧಿಸಿ ಪ್ರತಿಭಟನೆ

ಕಲಬುರಗಿ: ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಸೇರಿದಂತೆ ಇಂಧನ ದರಗಳಲ್ಲಿ ನಿರಂತರ ಏರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) [ಎಸ್‌ಯುಸಿಐ(ಸಿ)] ಕಲಬುರಗಿ ಜಿಲ್ಲಾ ಸಮಿತಿಯ ವತಿಯಿಂದ ನಗರದ ಎಸ್‌ವಿಪಿ ವೃತ್ತದ ಬಳಿ ರವಿವಾರ ಸಂಜೆ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ಸಿಎನ್‌ಜಿ ದರ ಏರಿಕೆಯನ್ನು ತಕ್ಷಣ ಹಿಂಪಡೆಯುವಂತೆ ಒತ್ತಾಯಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ಜಿಲ್ಲಾ ಕಾರ್ಯದರ್ಶಿ ಆರ್.ಕೆ. ವೀರಭದ್ರಪ್ಪ, ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಹಿನ್ನೆಲೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದೆ ಎಂಬ ಕಾರಣವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಆದರೆ ಯುದ್ಧ ಆರಂಭವಾದ ತಕ್ಷಣವೇ ದರ ಏರಿಕೆ ಮಾಡದೆ, ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಬಳಿಕ ಇಂಧನ ದರಗಳನ್ನು ಹೆಚ್ಚಿಸಿರುವುದು ಸರ್ಕಾರದ ದ್ವಂದ್ವ ನೀತಿಯನ್ನು ಬಯಲಿಗೆಳೆಯುತ್ತದೆ ಎಂದು ಆರೋಪಿಸಿದರು.
ಕೋವಿಡ್ ಅವಧಿಯಲ್ಲಿ ಹಾಗೂ ನಂತರ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಗಣನೀಯವಾಗಿ ಇಳಿಕೆಯಾಗಿದ್ದರೂ ಅದರ ಲಾಭವನ್ನು ಜನರಿಗೆ ನೀಡಲಿಲ್ಲ. ಅಲ್ಲದೆ ರಿಯಾಯಿತಿ ದರದಲ್ಲಿ ತೈಲ ಖರೀದಿಸಿದ ಸಂದರ್ಭಗಳಲ್ಲಿಯೂ ಇಂಧನ ದರ ಕಡಿತಗೊಳಿಸುವ ಬದಲು ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಹೆಚ್ಚಿಸುವ ಮೂಲಕ ಜನರ ಮೇಲೆ ಹೆಚ್ಚುವರಿ ಹೊರೆ ಹಾಕಿದೆ ಎಂದು ಅವರು ಟೀಕಿಸಿದರು.
ಇಂಧನ ದರ ಏರಿಕೆಯಿಂದ ಜನಸಾಮಾನ್ಯರು, ಆಟೋ ಚಾಲಕರು, ಸಾರಿಗೆ ಕ್ಷೇತ್ರದ ಕಾರ್ಮಿಕರು, ಹೋಟೆಲ್ ಉದ್ಯಮಿಗಳು ಸೇರಿದಂತೆ ಎಲ್ಲಾ ವರ್ಗದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಧನ ಬೆಲೆ ಹೆಚ್ಚಳದಿಂದ ಸಾರಿಗೆ ವೆಚ್ಚ ಏರಿಕೆಯಾಗುತ್ತಿದ್ದು, ಅದರ ಪರಿಣಾಮವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಹಣದುಬ್ಬರ ಹೆಚ್ಚಾಗುತ್ತಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗುವ ಬದಲು ಇಂಧನ ಮೇಲಿನ ತೆರಿಗೆ ಭಾರವನ್ನು ಕಡಿಮೆ ಮಾಡಬೇಕು. ಜನರ ಹಿತದೃಷ್ಟಿಯಿಂದ ಪರ್ಯಾಯ ತೈಲ ಮೂಲಗಳ ಹುಡುಕಾಟಕ್ಕೆ ಮುಂದಾಗಬೇಕು ಎಂದು ಎಸ್‌ಯುಸಿಐ(ಸಿ) ಮುಖಂಡರು ಒತ್ತಾಯಿಸಿದರು.
ಜಿಲ್ಲಾ ಸಮಿತಿಯ ಸದಸ್ಯರಾದ ಕಾ. ವಿ.ನಾಗಮ್ಮಾಳ್ ಇನ್ನಿತರರು ಮಾತನಾಡಿದರು.
ಪ್ರತಿಭಟನೆಯಲ್ಲಿ ಎಮ್. ಶಶಿಧರ್, ರಾಮಣ್ಣ ಇಬ್ರಾಹಿಂಪುರ, ಗಣಪತರಾವ ಮಾನೆ, ಎಸ್.ಎಮ್.ಶರ್ಮಾ, ಜಗನ್ನಾಥ ಎಸ್.ಎಚ್., ಮಹೇಶ ಎಸ್.ಬಿ, ರಾಘವೇಂದ್ರ ಎಮ್. ಜಿ, ರಾಧಾ, ವಿಶಾಲಾಕ್ಷಿ ಪಾಟೀಲ್, ಮಹಾದೇವಿ, ಈಶ್ವರ, ಗೌರಮ್ಮ, ರಮೇಶ ದೇವಕರ್, ದೇವರಾಜ, ಭೀಮು ಆಂದೋಲಾ ಹಾಗೂ ಪಕ್ಷದ ಸದಸ್ಯರು, ಬೆಂಬಲಿಗರು ಮೊದಲಾದವರು ಭಾಗವಹಿಸಿದ್ದರು.






