Kalaburagi | ಬೆಳೆಗಳ ಕೀಟ, ರೋಗ ನಿಯಂತ್ರಣಕ್ಕೆ ಕೃಷಿ ಇಲಾಖೆಯಿಂದ 7 ತಂಡಗಳ ರಚನೆ : ಸಮದ್ ಪಟೇಲ್

ಕಲಬುರಗಿ : ಜಿಲ್ಲೆಯಲ್ಲಿ ತೊಗರಿ ಸೇರಿದಂತೆ ವಿವಿಧ ಬೆಳೆಗಳಿಗೆ ಬಾಧಿಸುವ ಕೀಟ, ರೋಗ ಹಾಗೂ ಇತರ ಪೀಡೆಗಳ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಉದ್ದೇಶದಿಂದ ಕೃಷಿ ಇಲಾಖೆ ಹಾಗೂ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳನ್ನೊಳಗೊಂಡ ಏಳು ತಂಡಗಳನ್ನು ರಚಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದ್ದಾರೆ.
2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾದ ತೊಗರಿ, ಹತ್ತಿ, ಕಬ್ಬು ಹಾಗೂ ಹಿಂಗಾರು ಹಂಗಾಮಿನ ಕಡಲೆ, ಜೋಳ ಸೇರಿದಂತೆ ವಿವಿಧ ಬೆಳೆಗಳ ಆರೋಗ್ಯ ಸ್ಥಿತಿಗತಿ ಪರಿಶೀಲಿಸಲು ನ.17ರಿಂದ ಎಂಟು ವಾರಗಳ ಕಾಲ ತೊಗರಿ ಆರೋಗ್ಯ ಸಮೀಕ್ಷೆ ಹಾಗೂ ಕ್ಷಿಪ್ರ ಸಂಚಾರಿ ಸಮೀಕ್ಷೆ (ರ್ಯಾಪಿಡ್ ರೋವಿಂಗ್ ಸರ್ವೆ) ಹಮ್ಮಿಕೊಳ್ಳಲಾಗಿದೆ ಎಂದು ಸಮೀಕ್ಷೆ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾಹಿತಿ ನೀಡಿದರು.
ಪ್ರತಿ ಮಂಗಳವಾರ ಏಳು ತಂಡಗಳ ಅಧಿಕಾರಿಗಳು ಜಿಲ್ಲೆಯ ಎಲ್ಲ 11 ತಾಲೂಕುಗಳ ವಿವಿಧ ಗ್ರಾಮಗಳ ಕೃಷಿ ಕ್ಷೇತ್ರಗಳಿಗೆ ಭೇಟಿ ನೀಡಿ, ಬೆಳೆಗಳಲ್ಲಿ ಕಂಡುಬರುವ ಕೀಟ ಹಾಗೂ ರೋಗಗಳ ಬಾಧೆಯನ್ನು ಪರಿಶೀಲಿಸಲಿದ್ದಾರೆ. ಅಲ್ಲದೆ, ಬೆಳೆಗಳಿಗೆ ಎದುರಾಗಬಹುದಾದ ಸಮಸ್ಯೆಗಳ ನಿರ್ವಹಣೆ ಹಾಗೂ ನಿಯಂತ್ರಣ ಕ್ರಮಗಳ ಕುರಿತು ರೈತರಿಗೆ ಅಗತ್ಯ ಮಾಹಿತಿ ಮತ್ತು ಸಲಹೆ ನೀಡಲಿದ್ದಾರೆ.
ಇದರೊಂದಿಗೆ ಪ್ರತಿ ಗುರುವಾರ ಎಂಟು ವಾರಗಳವರೆಗೆ ಆಕಾಶವಾಣಿ (ಆಲ್ ಇಂಡಿಯಾ ರೇಡಿಯೋ) ಮೂಲಕ ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಕೃಷಿ ವಿಜ್ಞಾನಿಗಳು ರೈತರೊಂದಿಗೆ ಸಂವಾದ ನಡೆಸಲಿದ್ದಾರೆ. ವಿವಿಧ ಬೆಳೆಗಳಲ್ಲಿ ಕಾಣಿಸಿಕೊಳ್ಳುವ ಕೀಟ ಮತ್ತು ರೋಗಗಳು, ಅವುಗಳ ನಿರ್ವಹಣೆ ಹಾಗೂ ಬೆಳೆ ಸಂರಕ್ಷಣಾ ಕ್ರಮಗಳ ಕುರಿತು ತಜ್ಞರು ಮಾಹಿತಿ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ಸಹಾಯಕ ಸಂಶೋಧನಾ ನಿರ್ದೇಶಕಿ ಡಾ. ತಂಬುರಾಣಿ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ರಾಜು ತೇಗ್ಗೆಳ್ಳಿ, ಕಲಬುರಗಿ ಹಾಗೂ ಸೇಡಂ ಉಪ ಕೃಷಿ ನಿರ್ದೇಶಕರು, ಎಲ್ಲ ತಾಲೂಕುಗಳ ಸಹಾಯಕ ಕೃಷಿ ನಿರ್ದೇಶಕರು ಮತ್ತು ಕೃಷಿ ವಿಜ್ಞಾನಿಗಳು ಉಪಸ್ಥಿತರಿದ್ದರು.






