ಕಲಬುರಗಿ| ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತಪರ ಸಂಘಟನೆಗಳಿಂದ ಆಹೋರಾತ್ರಿ ಧರಣಿ

ಯಡ್ರಾಮಿ: ಕಬ್ಬಿಗೆ ಪ್ರತಿ ಟನ್‌ಗೆ 3,600 ದರ ನಿಗದಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಬ್ಬು ಬೆಳೆಗಾರರು ಹಾಗೂ ವಿವಿಧ ರೈತ ಮತ್ತು ಕನ್ನಡಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ತಾಲೂಕಿನ ನಾಗರಹಳ್ಳಿ ಗ್ರಾಮದ ದಿ ಉಗಾರ ಶುಗಾರ್ ವರ್ಕ್ ಲಿಮಿಟೆಡ್ ಸಕ್ಕರೆ ಕಾರ್ಖಾನೆಯ ಎದುರು ಅನಿರ್ದಿಷ್ಟ ಕಾಲ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ), ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಚುನ್ನಪ್ಪ ಪೂಜಾರಿ ಮತ್ತು ಕೋಡಿಹಳ್ಳಿ ಚಂದ್ರಶೇಖರ್ ಬಣ), ಭಾರತೀಯ ಕೃಷಿಕ ಸಮಾಜ (ನವದೆಹಲಿ) ಸೇರಿದಂತೆ ವಿವಿಧ ದಲಿತ ಹಾಗೂ ಪ್ರಗತಿಪರ ನೇತೃತ್ವದಲ್ಲಿ ಧರಣಿ ಆರಂಭಿಸಲಾಗಿದ್ದು ಕಲಬುರಗಿ, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಿಂದ ರೈತರು ಆಗಮಿಸಿದ್ದಾರೆ.
ಬೆಳಗಾವಿ ಮಾದರಿಯಲ್ಲಿ ಪ್ರತಿ ಟನ್ ಕಬ್ಬಿಗೆ 3,600 ದರ ನಿಗದಿಪಡಿಸಬೇಕು. ಕಬ್ಬು ಕಟಾವಿಗೆ ನಿಗದಿತ ದಿನಾಂಕದಿಂದ 15 ದಿನಗಳೊಳಗೆ ಕಟಾವು ಪೂರ್ಣಗೊಳಿಸಬೇಕು ಹಾಗೂ ಕಟಾವಾದ 15 ದಿನಗಳೊಳಗೆ ರೈತರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಬೇಕು. ಅಲ್ಲದೆ, ಪ್ರತಿ ಟನ್ ಕಬ್ಬಿಗೆ 500 ಗ್ರಾಂ ಉತ್ತಮ ಗುಣಮಟ್ಟದ ಸಕ್ಕರೆಯನ್ನು ಉಚಿತವಾಗಿ ನೀಡಬೇಕು. ಕಾರ್ಖಾನೆಯಿಂದ ಹೊರಸೂಸುವ ಹೊಗೆ ಹಾಗೂ ಕಲುಷಿತ ನೀರಿನಿಂದ ಉಂಟಾಗುತ್ತಿರುವ ಪರಿಸರ ಹಾನಿಗೆ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಕಾರ್ಖಾನೆ ಆವರಣದಲ್ಲಿ ರೈತರ ಅನುಕೂಲಕ್ಕಾಗಿ ರೈತ ಭವನ ನಿರ್ಮಿಸಬೇಕು. ಕಬ್ಬು ಸಾಗಣೆ ಮಾಡುವ ಚಾಲಕರು ಹಾಗೂ ಕಾರ್ಮಿಕರಿಗೆ ರಿಯಾಯಿತಿ ದರದಲ್ಲಿ ಊಟ ಒದಗಿಸುವ ಕ್ಯಾಂಟೀನ್ ವ್ಯವಸ್ಥೆ ಕಲ್ಪಿಸಬೇಕು. ಶುದ್ಧ ಕುಡಿಯುವ ನೀರು, ಸ್ನಾನಗೃಹ ಹಾಗೂ ಶೌಚಾಲಯದಂತಹ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.






