ಕಲಬುರಗಿ| ರೈತ ನಾಯಕರ ಬಿಡುಗಡೆಗೆ ಎಐಕೆಕೆಎಂಎಸ್ ಆಗ್ರಹ

ಕಲಬುರಗಿ: ವಿಜಯಪುರದಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಸ್ಥಾಪನೆಗೆ ಆಗ್ರಹಿಸಿ ಹಾಗೂ ಸರಕಾರ ಜಾರಿಗೊಳಿಸಲು ಹೊರಟಿರುವ ಪಿಪಿಪಿ (ಸಾರ್ವಜನಿಕ–ಖಾಸಗಿ ಸಹಭಾಗಿತ್ವ) ಮಾದರಿಯನ್ನು ವಿರೋಧಿಸಿ ಹೋರಾಟ ನಡೆಸುತ್ತಿದ್ದ ವೇಳೆ ಎಐಕೆಕೆಎಂಎಸ್ ರೈತ ಸಂಘಟನೆಯ ಅಖಿಲ ಭಾರತ ಮಂಡಳಿ ಸದಸ್ಯ ಬಿ.ಭಗವಾನರೆಡ್ಡಿ, ಅನೀಲ್ ಹೊಸಮನಿ ಸೇರಿದಂತೆ ಇತರ ಹೋರಾಟಗಾರರನ್ನು ಪೊಲೀಸರು ಬಂಧಿಸಿರುವ ಕ್ರಮವನ್ನು ಎಐಕೆಕೆಎಂಎಸ್ ಹಲಕರಟಿ ಗ್ರಾಮ ಘಟಕದ ಪದಾಧಿಕಾರಿಗಳು ಖಂಡಿಸಿದ್ದಾರೆ.
ಈ ಕುರಿತು ಹಲಕರಟಿ ಗ್ರಾಪಂ ಪಿಡಿಒ ಗೋಪಾಲ ಕಟ್ಟಿಮನಿ ಮತ್ತು ಅಧ್ಯಕ್ಷ ಸಿದ್ದುಗೌಡ ಪಾಟೀಲ ಅವರ ಮೂಲಕ ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಿ, ಬಂಧಿತ ನಾಯಕರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಸರಕಾರ ಜನರ ನ್ಯಾಯಸಮ್ಮತ ಬೇಡಿಕೆಗಳನ್ನು ನಿರಂತರವಾಗಿ ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ, ಹಲವು ದಿನಗಳಿಂದ ವಿಜಯಪುರದಲ್ಲಿ ಶಾಂತಿಯುತವಾಗಿ ಹೋರಾಟ ನಡೆಯುತ್ತಿತ್ತು. ಈ ಚಳವಳಿಗೆ ವಿಜಯಪುರ ಜಿಲ್ಲೆಯಾದ್ಯಂತ ವ್ಯಾಪಕ ಜನಬೆಂಬಲ ಲಭಿಸಿತ್ತು. ಶುಕ್ರವಾರ ವಿಜಯಪುರದ ಉಸ್ತುವಾರಿ ಸಚಿವರ ನಿವಾಸದ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ, ಕಾಮ್ರೇಡ್ ಭಗವಾನ್ ರೆಡ್ಡಿ, ಅನೀಲ್ ಹೊಸಮನಿ ಸೇರಿದಂತೆ ಇತರ ನಾಯಕರನ್ನು ಪೊಲೀಸರು ಅಕ್ರಮವಾಗಿ ಬಂಧಿಸುವ ಮೂಲಕ ಜಾಮೀನು ರಹಿತ ಸೆಕ್ಷನ್‌ಗಳನ್ನು ಒಳಗೊಂಡ ಸುಳ್ಳು ಮತ್ತು ಕೃತಕ ಪ್ರಕರಣಗಳನ್ನು ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದು ಹೋರಾಟಗಳನ್ನು ಹತ್ತಿಕ್ಕುವ ಸರಕಾರದ ಷಡ್ಯಂತ್ರವಾಗಿದೆ ಎಂದು ಸಂಘಟಕರು ಆರೋಪಿಸಿದ್ದಾರೆ.
ಜನರಿಗೆ ಲಭ್ಯವಾಗಬೇಕಾದ ಸಾರ್ವಜನಿಕ ಆರೋಗ್ಯ ಸೇವೆಗಾಗಿ ನಡೆಯುತ್ತಿರುವ ಜನಾಂದೋಲನವನ್ನು ಕುಗ್ಗಿಸಲು ಕಾಂಗ್ರೆಸ್ ಸರಕಾರ ಅತ್ಯಂತ ಹೀನ ಮತ್ತು ಅಧಿಕಾರಶಾಹಿ ಕ್ರಮ ಅನುಸರಿಸಿದೆ. ಜನರನ್ನು ಭಯಭೀತಗೊಳಿಸಿ ಹೋರಾಟಗಳು ಇನ್ನಷ್ಟು ವ್ಯಾಪಿಸುವುದನ್ನು ತಡೆಯುವುದೇ ಈ ಬಂಧನದ ಉದ್ದೇಶವಾಗಿದೆ. ಬಂಧನಕ್ಕೊಳಗಾಗಿರುವ ಕಾಮ್ರೇಡ್ ಭಗವಾನ್ ರೆಡ್ಡಿ ಅವರು ವಿಜಯಪುರ ಜಿಲ್ಲೆ ಸೇರಿದಂತೆ ಕರ್ನಾಟಕದಾದ್ಯಂತ ಹಲವು ಜನಪರ ಹೋರಾಟಗಳ ಮುಂಚೂಣಿಯಲ್ಲಿದ್ದು, ಖಾಸಗೀಕರಣದ ವಿರುದ್ಧ ಹಾಗೂ ಸಾರ್ವಜನಿಕ ಹಿತಾಸಕ್ತಿಗಾಗಿ ಸದಾ ಹೋರಾಡಿಕೊಂಡು ಬಂದಿದ್ದಾರೆ. ಇಂತಹ ನಾಯಕರನ್ನು ಗುರಿಯಾಗಿಸುವುದು ಸರಕಾರದ ಜನವಿರೋಧಿ ಮತ್ತು ಕಾರ್ಪೊರೇಟ್ ಪರ ಧೋರಣೆಯನ್ನು ಬಹಿರಂಗಪಡಿಸುತ್ತದೆ ಎಂದು ದೂರಿದ್ದಾರೆ.
ಬಂಧಿತ ಹೋರಾಟಗಾರರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ತೀವ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಐಕೆಕೆಎಂಎಸ್ ರೈತ ಸಂಘಟನೆಯ ಅಧ್ಯಕ್ಷ ಭೀಮಪ್ಪ ಮಾಟ್ನಳ್ಳಿ, ಕಾರ್ಯದರ್ಶಿ ಸಾಬಣ್ಣ ಸುಣಗಾರ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.







