ಕಲಬುರಗಿ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಅಜ್ಮಲ್ ಗೋಳಾ, ಉಪ ಮೇಯರ್ ಆಗಿ ಫರ್ಹಾನಾಜ್ ಖುಸ್ರೋ ಜಹಗೀರ್ದಾರ್ ಆಯ್ಕೆ
ಕಾಂಗ್ರೆಸ್ಗೆ ಮತ್ತೊಮ್ಮೆ ಪಾಲಿಕೆ ಗದ್ದುಗೆ; 24ನೇ ಅವಧಿಗೆ ಹೊಸ ಸಾರಥಿಗಳ ಆಯ್ಕೆ

ಅಜ್ಮಲ್ ಅಹಮದ್ ಗೋಳಾ | ಫರ್ಹಾನಾಜ್ ಖುಸ್ರೋ ಜಹಗೀರ್ದಾರ್
ಕಲಬುರಗಿ: ಭಾರಿ ಕುತೂಹಲ ಮೂಡಿಸಿದ್ದ ಕಲಬುರಗಿ ಮಹಾನಗರ ಪಾಲಿಕೆಯ 24ನೇ ಅವಧಿಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದು, ಪಾಲಿಕೆಯ ಆಡಳಿತದ ಚುಕ್ಕಾಣಿ ಮತ್ತೊಮ್ಮೆ ತನ್ನದಾಗಿಸಿಕೊಂಡಿದೆ.
ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯ ಅಜ್ಮಲ್ ಅಹಮದ್ ಗೋಳಾ ಅವರು ನೂತನ ಮೇಯರ್ ಆಗಿ ಹಾಗೂ ಫರ್ಹಾನಾಜ್ ಖುಸ್ರೋ ಜಹಗೀರ್ದಾರ್ ಅವರು ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಕಲಬುರಗಿ ಮಹಾನಗರ ಪಾಲಿಕೆಯ 21ನೇ ವಾರ್ಡ್ನ ಸದಸ್ಯ ಅಜ್ಮಲ್ ಅಹಮದ್ ಗೋಳಾ ಅವರು ಮೇಯರ್ ಸ್ಥಾನಕ್ಕೆ ಹಾಗೂ 20ನೇ ವಾರ್ಡ್ನ ಸದಸ್ಯೆ ಫರ್ಹಾನಾಜ್ ಖುಸ್ರೋ ಜಹಗೀರ್ದಾರ್ ಅವರು ಉಪ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು.
ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಆಗಸ್ಟ್ 7ರಂದು ಚುನಾವಣೆ ನಡೆಯಬೇಕಾಗಿತ್ತು. ಆದರೆ ಕೆಲ ಕಾರಣಗಳಿಂದ ಚುನಾವಣೆ ಮುಂದೂಡಿಕೆಯಾಗಿದ್ದು, ಪ್ರಾದೇಶಿಕ ಆಯುಕ್ತೆ ಜಾಹೀರಾ ನಶೀಮ್ ಅವರು ಆಗಸ್ಟ್ 29ರಂದು ಚುನಾವಣೆ ನಡೆಸುವಂತೆ ಪರಿಷ್ಕೃತ ಅಧಿಸೂಚನೆ ಹೊರಡಿಸಿದ್ದರು.
ಇದರಂತೆ ಶನಿವಾರ ನಡೆದ ಚುನಾವಣೆಯಲ್ಲಿ ಅಜ್ಮಲ್ ಅಹಮದ್ ಗೋಳಾ ಹಾಗೂ ಫರ್ಹಾನಾಜ್ ಖುಸ್ರೋ ಜಹಗೀರ್ದಾರ್ ಅವರು ಕ್ರಮವಾಗಿ ಮೇಯರ್ ಮತ್ತು ಉಪ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ಕಲಬುರಗಿ ಮಹಾನಗರ ಪಾಲಿಕೆಯ 24ನೇ ಅವಧಿಯ ಆಡಳಿತದ ಹೊಣೆ ಹೊತ್ತಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ 35 ಮತಗಳು ಪಡೆದರೆ ಬಿಜೆಪಿ ಅಭ್ಯರ್ಥಿ 29 ಮತಗಳನ್ನು ಪಡೆದರು.






