Kalaburagi | ಬಿಸಿಎಂ ಮಹಿಳಾ ಹಾಸ್ಟೆಲ್ನಲ್ಲಿ ಮದ್ಯದ ಪಾರ್ಟಿ : ವೀಡಿಯೋ ವೈರಲ್ !

ಸಾಂದರ್ಭಿಕ ಚಿತ್ರ | Photo Credit : magnific.com
ಕಲಬುರಗಿ: ಆಳಂದ ತಾಲೂಕಿನ ಕಡಗಂಚಿಯ ಬಿಸಿಎಂ ಮಹಿಳಾ ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿಯರು ಮದ್ಯ ಸೇವನೆ ಮಾಡುತ್ತಿದ್ದರು ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲಿ ಹಾಸ್ಟೆಲ್ ಕೊಠಡಿಯೊಂದರಲ್ಲಿ ಕೆಲ ವಿದ್ಯಾರ್ಥಿನಿಯರು ಮದ್ಯ ಸೇವಿಸುತ್ತಾ ಪಾರ್ಟಿ ನಡೆಸುತ್ತಿರುವಂತೆ ಕಾಣಿಸುತ್ತಿದೆ. ಅಲ್ಲದೆ, ಮಹಿಳಾ ಹಾಸ್ಟೆಲ್ಗೆ ಅನಧಿಕೃತವಾಗಿ ಕೆಲ ಯುವಕರು ರಾತ್ರಿ ವೇಳೆ ಪ್ರವೇಶಿಸಿ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿವೆ.
ಘಟನೆಗೆ ಸಂಬಂಧಿಸಿದಂತೆ ಹಾಸ್ಟೆಲ್ ಆಡಳಿತವು ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದೆ ಎಂಬ ಆರೋಪವೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಾರ್ಡನ್ ಹಾಗೂ ವಿದ್ಯಾರ್ಥಿನಿಯೊಬ್ಬರ ನಡುವಿನ ಸಂಭಾಷಣೆ ಎನ್ನಲಾದ ಆಡಿಯೋ ಕ್ಲಿಪ್ ಕೂಡ ವೈರಲ್ ಆಗಿದ್ದು, ಈ ಕುರಿತು ತನಿಖೆ ನಡೆಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ವೈರಲ್ ವೀಡಿಯೋ ಕುರಿತು ಇಲಾಖೆಯಿಂದ ಸ್ಪಷ್ಟನೆ:
ಈ ಕುರಿತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸ್ಪಷ್ಟನೆ ನೀಡಿದ್ದು, ವೈರಲ್ ಆಗಿರುವ ವಿಡಿಯೋ 3 ರಿಂದ 4 ವರ್ಷಗಳ ಹಿಂದಿನದ್ದು ಎಂದು ತಿಳಿಸಿದೆ.
ಪ್ರಕಟಣೆಯಲ್ಲಿ, ಕಡಗಂಚಿಯ ಬಾಲಕಿಯರ ವಸತಿ ನಿಲಯದಲ್ಲಿ ಸದ್ಯ ಯಾವುದೇ ಹಾಸ್ಟೆಲ್ ಕಾರ್ಯನಿರ್ವಹಿಸುತ್ತಿಲ್ಲ. ಈ ಹಿಂದೆ ಇದ್ದ ವಸತಿ ನಿಲಯವನ್ನು ಆಳಂದ ಪಟ್ಟಣಕ್ಕೆ ಸ್ಥಳಾಂತರಿಸಲಾಗಿದೆ ಎಂದು ಹೇಳಲಾಗಿದೆ.
ವೈರಲ್ ವಿಡಿಯೋದಲ್ಲಿರುವ ಘಟನೆ ಹಲವು ವರ್ಷಗಳ ಹಿಂದಿನದ್ದಾಗಿದ್ದು, ಅದರಲ್ಲಿ ಕಾಣಿಸಿಕೊಂಡಿರುವ ವಿದ್ಯಾರ್ಥಿನಿಯರಲ್ಲಿ ಕೆಲವರಿಗೆ ಈಗಾಗಲೇ ಮದುವೆಯಾಗಿರುವ ಮಾಹಿತಿ ಲಭ್ಯವಾಗಿದೆ. ಪ್ರಕರಣದ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹಿಸಲು ತಾಲೂಕು ಬಿಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.






