ಕಲಬುರಗಿ | ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯಿಂದ ಪ್ರತ್ಯೇಕ ರಾಜ್ಯಕ್ಕಾಗಿ ಅಹೋರಾತ್ರಿ ಧರಣಿ

ಕಲಬುರಗಿ: ಕಲ್ಯಾಣ ಕರ್ನಾಟಕ ಎಂದು ಹೆಸರಿಟ್ಟರೂ ಸಹ ಮೊದಲಿನಂತೆಯೇ ಹಿಂದುಳಿದ ಪ್ರದೇಶವಾಗಿದ್ದು, ಕೂಡಲೇ ಪ್ರತ್ಯೇಕ ಕಲ್ಯಾಣ ಕರ್ನಾಟಕ ರಾಜ್ಯ ಘೋಷಿಸುವಂತೆ ಒತ್ತಾಯಿಸಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯ ಸದಸ್ಯರು ಶುಕ್ರವಾರ ನಗರದ ಜಗತ್ ವೃತ್ತದಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದ್ದು, ನ.1ರಂದು ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಪ್ರತ್ಯೇಕ ರಾಜ್ಯದ ಧ್ವಜಾರೋಹಣ ಮಾಡಲಾಗುವುದು ಎಂದು ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಎಂ.ಎಸ್. ಪಾಟೀಲ್ ನರಿಬೋಳ್ ಅವರು ತಿಳಿಸಿದ್ದಾರೆ.
ಧರಣಿಯಲ್ಲಿ ಮಾತನಾಡಿದ ಅವರು, ನಮ್ಮ ಭಾಗದ ಹೆಸರು ಕಲ್ಯಾಣವಾಯಿತೇ ಹೊರತು, ನಮ್ಮ ಜನಕ್ಕೆ ಕಲ್ಯಾಣವಾಗಲಿಲ್ಲ. ಹಿಂದುಳಿದ ಪ್ರದೇಶ ಎಂದು ಸಾಕಷ್ಟು ಅನುದಾನವನ್ನು ಸರ್ಕಾರ ಬಿಡುಗಡೆಗೊಳಿಸಿದ ಪ್ರಯೋಜನ ವಾಗುತ್ತಿಲ್ಲ. ರಾಜ್ಯದಲ್ಲೇ ಪಿಯುಸಿ ಫಲಿತಾಂಶದಲ್ಲಿ ಕಲ್ಯಾಣ ಕರ್ನಾಟಕ ಕೆಳಗಿಂದ ಎರಡನೇ ವಿಮಾನ ನಿಲ್ದಾಣ ವಿಮಾನಗಳ ಹಾರಾಟವಿಲ್ಲದೆ ಪ್ರಯಾಣಿಕರು ಪರಿತಪ್ಪಿಸುವಂತಾಗಿದೆ. ಎಸೆಸೆಲ್ಸಿಯಲ್ಲಿ ಮೇಲಿಂದ ಕೊನೆಯ ಸ್ಥಾನಕ್ಕೆ ಇಳಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈಲ್ವೆ ಡಿಎಸ್ಪಿ ಕಚೇರಿ ಹುಬ್ಬಳ್ಳಿ ಕೈಸೇರಿದೆ. ರಾಜ್ಯೋತ್ಸವ ಪ್ರಶಸ್ತಿ ನೀಡುವಲ್ಲಿ ನಮ್ಮ ಭಾಗವನ್ನು ಕಡೆಗಣಿಸಲಾಗುತ್ತಿದೆ. ಕಾನೂನು ಹದಗೆಟ್ಟಿದೆ. ಇಲ್ಲಿ ದೀನ, ದಲಿತರ, ಬಡವರ ಮೇಲೆ ಹಲ್ಲೆಗಳಾಗುತ್ತಿದ್ದರೂ ಸಹ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ದೂರಿದರು.
ವೈದ್ಯಕೀಯ ಸೌಲಭ್ಯಗಳು ಕೇವಲ ಉಳ್ಳವರ ಪಾಲಾಗುತ್ತಿವೆ. ಸರ್ಕಾರಿ ಆಸ್ಪತ್ರೆಗಳ ಸಂಖ್ಯೆ ಹೆಚ್ಚಾಗುತ್ತಿವೆ. ಆದರೆ ಕೈಗೆಟಕುವ ದರದಲ್ಲಿ ವೈದ್ಯಕೀಯ ಸೇವೆ ದೊರೆಯುತ್ತಿಲ್ಲ. ಸರಿಯಾದ ರಸ್ತೆ, ನೀರು, ಚರಂಡಿ ವ್ಯವಸ್ಥೆಗಳಿಲ್ಲದೆ ಅನೇಕ ಗ್ರಾಮಗಳು ನರಕ ದರ್ಶನವಾಗುವಂತೆ ಇವೆ. ಮಕ್ಕಳಲ್ಲಿನ ಅಪೌಷ್ಠಿಕತೆಯ ಕೊರತೆಯಲ್ಲಿ ನಾವು ಕೊನೆಯ ಸ್ಥಾನದಲ್ಲಿದ್ದೇವೆ. ಸ್ಥಳೀಯರಿಗೆ ಉದ್ಯೋಗ ಇಲ್ಲ. ಭಾಗಶಃ ನಮ್ಮ ಭಾಗದ ಜನರು ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ಎಲ್ಲ ರೀತಿಯಿಂದ ಕಲ್ಯಾಣ ಕರ್ನಾಟಕ ಭಾಗ ಹಿಂದುಳಿಯುತ್ತಿದೆ. 371(ಜೆ) ಸಂಪುರ್ಣ ವಿಫಲವಾಗಿದೆ. ಸಂಪೂರ್ಣ ಅನುಷ್ಠಾನ ಯಕ್ಷ ಪ್ರಶ್ನೆಯಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸಂಪೂರ್ಣ ಬೆಳೆ ಹಾಳಾದರೂ ರೈತನ ಕಷ್ಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸುವಂತಹ ಸಂದರ್ಭಕಂಡುಬರುತ್ತಿಲ್ಲ. ಇಲ್ಲಿ ಸೇತುವೆಗಳೆ ಕೊಚ್ಚಿಕೊಂಡು ಹೋದರೂ ಕೇಳುವವರಿಲ್ಲ ಎಂದು ತಿಳಿಸಿದ್ದಾರೆ.
ಆನೇಕ ವರ್ಷಗಳಿಂದ ಈ ಭಾಗ ಪ್ರತ್ಯೇಕ ರಾಜ್ಯವಾಗಬೇಕೆಂಬ ಹೋರಾಟ ನಿರಂತರವಾಗಿದೆ. ಇದು ನಿಲ್ಲಲ್ಲ. ಮತ್ತಷ್ಟು ಉಗ್ರ ರೂಪ ಪಡೆಯುತ್ತದೆ. ನಮ್ಮ ಭಾಗ ಪ್ರತ್ಯೇಕ ರಾಜ್ಯವಾಗಿ ಉದಯವಾಗಬೇಕು. ನಮ್ಮ ಭಾಗದ ಜನ ಉದ್ಧಾರವಾಗಬೇಕು ಎಂದು ಧರಣಿ ಪ್ರಾರಂಭಿಸಿಲಾಗಿದ್ದು, ಹಗಲು ರಾತ್ರಿ ಧರಣಿ ನಂತರ ಶನಿವಾರ ನ.1ರಂದು ಬೆಳಿಗ್ಗೆ ಪ್ರತ್ಯೇಕ ರಾಜ್ಯ ಧ್ವಜಾರೋಹಣ ಮಾಡಿ ಸರ್ಕಾರಕ್ಕೆ ಸವಾಲು ಹಾಕಲು ಹೋರಾಟಗಾರರು ನಿರ್ಧರಿಸಿದ್ದಾರೆ ಎಂದು ಅವರು ಹೇಳಿದರು.
ಪ್ರತಿಭಟನೆಯಲ್ಲಿ ಆಶೋಕ್ ಗುರೂಜಿ, ವಿನೋದ್ ಜನವರಿ, ದಿವ್ಯಾ ಹಾಗರಗಿ, ಶ್ವೇತಾ ಸಿಂಗ್, ಸಂಜೀವಕುಮಾರ್ ಡೋಂಗರ ಗಾಂವ್, ಮಹಾದೇವಿ ಹೆಳವರ್, ಚಿದಾನಂದ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.







