ಕಲಬುರಗಿ| ಹಲ್ಲೆ, ಜಾತಿ ನಿಂದನೆ ಆರೋಪ: ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಸೇರಿ ಐವರ ವಿರುದ್ಧ ಪ್ರಕರಣ ದಾಖಲು

ಕಲಬುರಗಿ: ಹಲ್ಲೆ, ಜಾತಿ ನಿಂದನೆ, 50 ಸಾವಿರ ಹಪ್ತಾ ಬೇಡಿಕೆ ಹಾಗೂ ಕೊಲೆ ಬೆದರಿಕೆ ಆರೋಪದ ಮೇರೆಗೆ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಸೇರಿದಂತೆ ಐವರ ವಿರುದ್ಧ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಕಂಠ ರಾಠೋಡ್, ಮಡಿವಾಳಪ್ಪ ಅಮರಾವತಿ, ಅಶೋಕ್ ನಾಯಕ್, ಕರಣ್ ಹಾಗೂ ಅಜಯ್ ವಿರುದ್ಧ ಪ್ರಕರಣ ದಾಖಲಾಗಿದೆ. ಶಹಾಬಜಾರ್ ತಾಂಡಾದ ವ್ಯಾಪ್ತಿಯ ನಿವಾಸಿ ಶಿವರಾಜ್ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೆ.27ರಂದು ವೈಷ್ಣವಿ ದೇವಿ ದೇವಸ್ಥಾನದ ಬಳಿ ಮಂಜುನಾಥ್ ಎಂಬವರ ಮೇಲೆ ಕೆಲವರು ಬಡಿಗೆಯಿಂದ ಹಲ್ಲೆ ನಡೆಸುತ್ತಿದ್ದರು. ಇದನ್ನು ತಡೆಯಲು ಹೋದ ಶಿವರಾಜ್ ಹಾಗೂ ಅವರ ಸಂಗಡಿಗರ ಮೇಲೂ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಮಣಿಕಂಠ ರಾಠೋಡ್ ಕರೆ ಮೂಲಕ ಹಲ್ಲೆಗೆ ಪ್ರಚೋದನೆ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮರುದಿನ ಕರಣ್ ಎಂಬಾತ 50 ಸಾವಿರ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಭಾರತೀಯ ನ್ಯಾಯ ಸಂಹಿತೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.




