Kalaburagi | ಕೆಕೆಆರ್‌ಡಿಬಿಯಲ್ಲಿ ಭ್ರಷ್ಟಾಚಾರ ಆರೋಪ ; ಸೆ.17ರಂದು ಮುಖ್ಯಮಂತ್ರಿಗಳಿಗೆ ಕಪ್ಪು ಬಾವುಟ ಪ್ರದರ್ಶನ: ಮಹೇಶಕುಮಾರ ರಾಠೋಡ್

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ 2014ರಿಂದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಮೂಲಕ ಖರ್ಚು ಮಾಡಿರುವ ಸುಮಾರು 16 ಸಾವಿರ ಕೋಟಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ, ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಸೆ.17ರಂದು ಮುಖ್ಯಮಂತ್ರಿ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಲು ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ಹಾಗೂ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ನಿರ್ಧರಿಸಿವೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಮಹೇಶಕುಮಾರ ರಾಠೋಡ್ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಕೆಆರ್‌ಡಿಬಿಗೆ ಇದುವರೆಗೆ ಸುಮಾರು 29 ಸಾವಿರ ಕೋಟಿ ರೂ. ಮಂಜೂರಾಗಿದ್ದು, ಅದರಲ್ಲಿ 16 ಸಾವಿರ ಕೋಟಿ ರೂ. ಮಾತ್ರ ವೆಚ್ಚವಾಗಿದೆ. ಆದರೂ, ಪ್ರೊ. ನಂಜುಂಡಪ್ಪ ವರದಿಯಲ್ಲಿ ಉಲ್ಲೇಖಿಸಲಾಗಿದ್ದ ಪ್ರಾದೇಶಿಕ ಅಸಮಾನತೆ ಹಾಗೂ ಅಭಿವೃದ್ಧಿಯಲ್ಲಿ ಹಿಂದುಳಿದಿರುವಿಕೆ ಈಗಲೂ ಪ್ರೊ. ಗೋವಿಂದರಾವ್ ವರದಿಯಲ್ಲಿಯೂ ಮುಂದುವರಿದಿದೆ ಎಂದು ಹೇಳಿದರು.
“ಈವರೆಗೆ ವೆಚ್ಚ ಮಾಡಿರುವ ಅನುದಾನದ ಸಮಗ್ರ ಲೆಕ್ಕಪರಿಶೀಲನೆ ನಡೆಸಬೇಕು. ಹಣ ಎಲ್ಲಿಗೆ ಖರ್ಚಾಗಿದೆ, ಯಾವ ಕಾಮಗಾರಿಗಳು ನಡೆದಿವೆ ಎಂಬುದರ ಬಗ್ಗೆ ಪಾರದರ್ಶಕ ತನಿಖೆ ನಡೆಸಿ ಸತ್ಯಾಂಶವನ್ನು ಬಹಿರಂಗಪಡಿಸಬೇಕು” ಎಂದು ಅವರು ಒತ್ತಾಯಿಸಿದರು.
ಈ ಭಾಗದಲ್ಲಿ ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣ ಕ್ಷೇತ್ರ ಹದಗೆಟ್ಟಿದ್ದು, ವಿಶ್ವವಿದ್ಯಾಲಯಗಳಲ್ಲಿ ಹಲವು ವಿಭಾಗಗಳಿಗೆ ಒಬ್ಬರೇ ಮುಖ್ಯಸ್ಥರಾಗಿರುವ ಪರಿಸ್ಥಿತಿ ಇದೆ. ಅನೇಕ ಶಾಲೆ ಮತ್ತು ಕಾಲೇಜುಗಳು ಶಿಕ್ಷಕರು ಹಾಗೂ ಪ್ರಾಧ್ಯಾಪಕರ ಕೊರತೆಯಿಂದ ಸಂಕಷ್ಟದಲ್ಲಿವೆ ಎಂದು ಅವರು ಆರೋಪಿಸಿದರು.
ಕೆಕೆಆರ್‌ಡಿಬಿಗೆ ಬಿಡುಗಡೆಯಾದ ಅನುದಾನ ಮತ್ತು ಇದುವರೆಗೆ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿ, ಹಣದ ಬಳಕೆಯಲ್ಲಿ ಪಾರದರ್ಶಕತೆ ಖಚಿತಪಡಿಸಬೇಕು ಎಂದು ಆಗ್ರಹಿಸಿದರು.
ಎಐಕೆಎಸ್ ರಾಜ್ಯ ಕಾರ್ಯಾಧ್ಯಕ್ಷ ಮೌಲಾ ಮುಲ್ಲಾ ಮಾತನಾಡಿ, ಕಲಬುರಗಿ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು. ಜಾನುವಾರುಗಳ ಸಮೀಕ್ಷೆ ನಡೆಸಿ ಅಗತ್ಯ ಪ್ರಮಾಣದಲ್ಲಿ ಮೇವು ಒದಗಿಸಬೇಕು. ರೈತರ ಸಾಲ ಮನ್ನಾ ಮಾಡಬೇಕು. ಖಾಸಗಿ ಹಣಕಾಸು ಸಂಸ್ಥೆಗಳು ಸೇರಿದಂತೆ ಸಾಲ ನೀಡುವವರು ರೈತರ ಮೇಲೆ ಮರುಪಾವತಿಗೆ ಒತ್ತಡ ಹೇರದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜೇವರ್ಗಿಯಲ್ಲಿ ಕಳೆದ ಐದು ತಿಂಗಳಿಂದ 17 ಪೌರಕಾರ್ಮಿಕರು ಹೋರಾಟ ನಡೆಸುತ್ತಿದ್ದರೂ ಸ್ಥಳೀಯ ಶಾಸಕರು ಹಾಗೂ ಜಿಲ್ಲಾಡಳಿತ ಸ್ಪಂದಿಸಿಲ್ಲ ಎಂದು ಪೌರಕಾರ್ಮಿಕರಾದ ಗಂಗಮ್ಮ ಮತ್ತು ಯಲ್ಲಮ್ಮ ಆರೋಪಿಸಿದರು.
ಪೌರಕಾರ್ಮಿಕರ ನೇಮಕಾತಿ ಹಾಗೂ ಬಾಕಿ ವೇತನವನ್ನು ಶೀಘ್ರ ಪಾವತಿಸದಿದ್ದರೆ, ಜಿಲ್ಲಾಧಿಕಾರಿ ಕಚೇರಿ ಎದುರು ಮೈಮೇಲೆ ಕಸ ಸುರಿದುಕೊಂಡು ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಭೀಮಾಶಂಕರ ಮಾಡಿಯಾಳ, ಸಿದ್ದಪ್ಪ ಪಾಲ್ಕಿ, ಮಹಮ್ಮದ್ ಚೌಧರಿ, ಸಾಜೀದ್ ಅಹಮದ್, ಶಿವಲಿಂಗಮ್ಮ, ಶಾರದಾಬಾಯಿ, ಲೆಂಗಟೇಕರ್, ಶರಣಮ್ಮ, ಗಂಗಮ್ಮ, ಶಂಕರಮ್ಮ ಹಾಗೂ ರಾಘು ಉಪಸ್ಥಿತರಿದ್ದರು.






