Kalaburagi | ಶಹಾಬಾದ್ನಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಆರೋಪ : ಕಡಿವಾಣ ಹಾಕಲು ಜಿಲ್ಲಾಧಿಕಾರಿಗೆ ಮನವಿ

ಕಲಬುರಗಿ: ಶಹಾಬಾದ್ ನಗರದ ರಾವೂರ್ ಫೈಲ್ ಬಡಾವಣೆಯ ಸರ್ವೆ ನಂಬರ್ 129ರಲ್ಲಿ ಯಾವುದೇ ಪರವಾನಗಿ ಇಲ್ಲದೆ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಗೆ ಕಡಿವಾಣ ಹಾಕಬೇಕು ಎಂದು ಸ್ಥಳೀಯ ನಿವಾಸಿ ಅರವಿಂದ ಈರಣ್ಣ ದೋತ್ರೆ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ರಾವೂರ್ ಫೈಲ್ ಬಡಾವಣೆಯ ಸರ್ವೆ ನಂಬರ್ 129ರಲ್ಲಿರುವುದು ಸರ್ಕಾರಿ ಭೂಮಿಯಾಗಿದ್ದು, ಇಲ್ಲಿ ಯಾವುದೇ ರೀತಿಯ ಗಣಿಗಾರಿಕೆಗೆ ಅವಕಾಶವಿಲ್ಲ. ಆದರೂ ರಾಜಾರೋಷವಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಗಣಿಗಾರಿಕೆ ನಡೆಯುತ್ತಿರುವ ಸ್ಥಳದ ಕೂಗಳತೆಯಲ್ಲೇ ಜನವಸತಿ ಪ್ರದೇಶವಿದ್ದು, ರಾವೂರ್ ಫೈಲ್ ಬಡಾವಣೆಯಲ್ಲಿ ಸುಮಾರು 500 ಕುಟುಂಬಗಳು ವಾಸಿಸುತ್ತಿವೆ. ಗಣಿಗಾರಿಕೆಯಿಂದ ಉಂಟಾಗುತ್ತಿರುವ ಕರ್ಕಶ ಶಬ್ದಕ್ಕೆ ಸ್ಥಳೀಯರು ಬೇಸತ್ತಿದ್ದಾರೆ. ಮಕ್ಕಳಿಗೆ ಓದಲು ಕೂಡ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ನಿವಾಸಿಗಳು ಮಾನಸಿಕ ಯಾತನೆ ಅನುಭವಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಗಣಿಗಾರಿಕೆಯಿಂದ ದೊಡ್ಡ ಗಾತ್ರದ ಗುಂಡಿಗಳು ನಿರ್ಮಾಣವಾಗಿದ್ದು, ಅವುಗಳಿಗೆ ಯಾವುದೇ ಸುರಕ್ಷತಾ ಬೇಲಿ ಹಾಕಿಲ್ಲ. ಈ ಹಿಂದೆ ಬಡಾವಣೆಯ ಮಕ್ಕಳು ಗುಂಡಿಗಳನ್ನು ನೋಡಲು ಹೋಗಿ ಅವುಗಳಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರವಿಂದ ದೋತ್ರೆ ಆರೋಪಿಸಿದ್ದಾರೆ.
ಈಗಾಗಲೇ ಈ ಕುರಿತು ಶಹಾಬಾದ್ ತಹಸೀಲ್ದಾರ್, ಪೊಲೀಸ್ ಠಾಣೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ದಂಧೆಕೋರರ ವಿರುದ್ಧ ಕಠಿಣ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಬಡಾವಣೆಯ ಸಾರ್ವಜನಿಕರಿಗೆ ಅಕ್ರಮ ಗಣಿಗಾರಿಕೆಯ ಕಿರುಕುಳದಿಂದ ಮುಕ್ತಿ ದೊರಕಿಸಿಕೊಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಆಗ್ರಹಿಸಿದ್ದಾರೆ.






