Kalaburagi | ಅಂತರ್ಜಾತಿ ವಿವಾಹ ಯೋಜನೆಯಲ್ಲಿ ಅಕ್ರಮ ಆರೋಪ; ಸಮಗ್ರ ತನಿಖೆಗೆ ಕರ್ನಾಟಕ ರಾಷ್ಟ್ರ ಸಮಿತಿ ಒತ್ತಾಯ

ಕಲಬುರಗಿ: ಸಮಾಜ ಕಲ್ಯಾಣ ಇಲಾಖೆಯ ಅಂತರ್ಜಾತಿ ವಿವಾಹ ಪ್ರೋತ್ಸಾಹ ಧನ ಯೋಜನೆಯಲ್ಲಿ ನಿಯಮ ಉಲ್ಲಂಘಿಸಿ ಹಣ ಬಿಡುಗಡೆ ಮಾಡಿರುವುದು ಹಾಗೂ ಫಿಕ್ಸೆಡ್ ಡಿಪಾಸಿಟ್ (ಎಫ್‌ಡಿ)ಗಳನ್ನು ಅವಧಿಗೂ ಮುನ್ನ ಮುರಿದಿರುವ ಮೂಲಕ ಕಲಬುರಗಿ ಜಿಲ್ಲೆಯಲ್ಲಿ ಸುಮಾರು 21 ಕೋಟಿ ರೂ. ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಕರ್ನಾಟಕ ರಾಷ್ಟ್ರ ಸಮಿತಿ ಜಿಲ್ಲಾಧ್ಯಕ್ಷ ಸಚಿನ್ ಚವ್ಹಾಣ, ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಂಚೋಳಿ ತಾಲೂಕಿನಲ್ಲೇ ಸುಮಾರು 6 ಕೋಟಿ ರೂ. ಮೊತ್ತದ ಅಕ್ರಮ ನಡೆದಿರುವ ಶಂಕೆಯಿದ್ದು, ಈ ಬಗ್ಗೆ ಮುಖ್ಯಮಂತ್ರಿ ಅವರಿಗೆ ದೂರು ಸಲ್ಲಿಸಿ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಲಾಗುವುದು ಎಂದು ಹೇಳಿದರು.
ಅಂತರ್ಜಾತಿ ವಿವಾಹ ಪ್ರೋತ್ಸಾಹ ಧನ ಯೋಜನೆಯ ನಿಯಮಗಳ ಪ್ರಕಾರ ಅರ್ಹ ಪುರುಷ ಅರ್ಜಿದಾರರಿಗೆ 2.50 ಲಕ್ಷ ರೂ. ಹಾಗೂ ಮಹಿಳಾ ಅರ್ಜಿದಾರರಿಗೆ 3 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗುತ್ತದೆ. ಹಣದ ಒಂದು ಭಾಗವನ್ನು ದಂಪತಿಗಳ ಜಂಟಿ ಬ್ಯಾಂಕ್ ಖಾತೆಗೆ ನೆಫ್ಟ್ ಮೂಲಕ ಜಮೆ ಮಾಡಿ, ಉಳಿದ ಮೊತ್ತವನ್ನು ಮೂರು ವರ್ಷಗಳ ಅವಧಿಗೆ ಫಿಕ್ಸೆಡ್ ಡಿಪಾಸಿಟ್‌ನಲ್ಲಿ ಇರಿಸಬೇಕು. ನಿಗದಿತ ಅವಧಿ ಪೂರ್ಣಗೊಂಡ ನಂತರ ಅಗತ್ಯ ಪರಿಶೀಲನೆ ನಡೆಸಿ ಎಫ್‌ಡಿ ಮುರಿಯಬೇಕೆಂಬ ನಿಯಮವಿದೆ ಎಂದು ವಿವರಿಸಿದರು.
ಆದರೆ, ಚಿಂಚೋಳಿ ತಾಲೂಕಿನಲ್ಲಿ ಇದುವರೆಗೆ 169 ಅರ್ಜಿಗಳಿಗೆ ಹಣ ಬಿಡುಗಡೆ ಮಾಡಲಾಗಿದ್ದು, ತಲಾ 2.50 ಲಕ್ಷದ ರೂ. ಲೆಕ್ಕದಲ್ಲಿ ಸುಮಾರು 4.22 ಕೋಟಿ ರೂ. ಮೊತ್ತವಾಗುತ್ತದೆ. ಈ ಪ್ರಕರಣಗಳಲ್ಲಿ ಎಫ್‌ಡಿ ತೆರೆದ ಕೆಲವೇ ದಿನಗಳಲ್ಲಿ ಅದನ್ನು ಮುರಿದು ಹಣ ಪಡೆದಿರುವ ಆರೋಪಗಳಿವೆ. ಈ ಬಗ್ಗೆ ತನಿಖೆ ನಡೆಸಿದರೆ ಅಕ್ರಮದ ನಿಜಾಂಶ ಹೊರಬರಲಿದೆ ಎಂದು ಆರೋಪಿಸಿದರು.
ಕಲಬುರಗಿ ಜಿಲ್ಲಾದ್ಯಂತ 878 ಅರ್ಜಿಗಳಿಗೆ ಮೊದಲ ಮತ್ತು ಎರಡನೇ ಕಂತಿನ ಹಣ ಬಿಡುಗಡೆ ಮಾಡಲಾಗಿದ್ದು, ಒಟ್ಟು ಸುಮಾರು 21.95 ಕೋಟಿ ರೂ. ಮೊತ್ತ ನಿಯಮಾನುಸಾರ ಮೂರು ವರ್ಷಗಳ ಕಾಲ ಎಫ್‌ಡಿಯಲ್ಲಿ ಇರಿಸದೆ ದುರುಪಯೋಗಪಡಿಸಿಕೊಂಡಿರುವ ಶಂಕೆ ಇದೆ ಎಂದು ಹೇಳಿದರು.
ಇದೇ ರೀತಿಯ ಅಕ್ರಮ ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ನಡೆದಿರುವ ಸಾಧ್ಯತೆಯಿದ್ದು, ಸುಮಾರು 40 ಸಾವಿರ ಅರ್ಜಿಗಳ ಆಧಾರದ ಮೇಲೆ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿರಬಹುದೆಂಬ ಅನುಮಾನವಿದೆ. ಹೀಗಾಗಿ ರಾಜ್ಯಮಟ್ಟದಲ್ಲಿ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಅಂತರ್ಜಾತಿ ವಿವಾಹ ಪ್ರೋತ್ಸಾಹ ಧನ ಯೋಜನೆಯಡಿ ಸಲ್ಲಿಸಿರುವ ಕೆಲವು ಅರ್ಜಿಗಳಲ್ಲಿ ಡಬಲ್ ಅಥವಾ ಡುಪ್ಲಿಕೇಟ್ ಅರ್ಜಿಗಳು, ನಕಲಿ ದಂಪತಿಗಳು, ಸುಳ್ಳು ವಿವಾಹ ನೋಂದಣಿ ದಾಖಲೆಗಳು, ನಕಲಿ ಜಾತಿ ಹಾಗೂ ಆದಾಯ ಪ್ರಮಾಣಪತ್ರಗಳು ಮತ್ತು ಹೆಸರು ಬದಲಾವಣೆಗೆ ನಕಲಿ ಆಧಾರ್ ದಾಖಲೆಗಳನ್ನು ಬಳಸಿರುವ ಆರೋಪಗಳೂ ಕೇಳಿಬಂದಿವೆ ಎಂದು ಸಚಿನ್ ಚವ್ಹಾಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮೊಶಿನ್ ಪಟೇಲ್, ಸೀತಾರಾಮ್ ಪವಾರ್, ಪರಮೇಶ ಕವಲಗಿ, ರಜಾಕ್ ಮನ್ನಾರ್, ಫಿನಿಕ್ಸ್ ಶರಣಪ್ಪ, ಶಿವರಾಜ್ ದೊಣ್ಣೂರ್ ಹಾಗೂ ಶಿವಪುತ್ರ ಗರೂರ್ ಉಪಸ್ಥಿತರಿದ್ದರು.






