ಕಲಬುರಗಿ | ಯುವತಿಗೆ ಲೈಂಗಿಕ ಕಿರುಕುಳ, ಹಲ್ಲೆ ಆರೋಪ : ರಾಷ್ಟ್ರ ರಕ್ಷಣಾ ಪಡೆಯ ಜಿಲ್ಲಾಧ್ಯಕ್ಷನ ವಿರುದ್ಧ ಎಫ್ಐಆರ್ ದಾಖಲು

ಕಲಬುರಗಿ : ಯುವತಿಗೆ ಲೈಂಗಿಕ ಕಿರುಕುಳ, ಹಲ್ಲೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಆರೋಪದಲ್ಲಿ ರಾಷ್ಟ್ರ ರಕ್ಷಣಾ ಪಡೆಯ ಜಿಲ್ಲಾಧ್ಯಕ್ಷನ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ತಾಲೂಕಿನ ಎಸ್.ಎನ್. ಹಿಪ್ಪರಗಾ ಗ್ರಾಮದ ಮಡಿವಾಳಪ್ಪ ಅಮರಾವತಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈತ ಪುನೀತ್ ಕೆರೆಹಳ್ಳಿ ನೇತೃತ್ವದ ರಾಷ್ಟ್ರ ರಕ್ಷಣಾ ಪಡೆಯ ಜಿಲ್ಲಾಧ್ಯಕ್ಷನಾಗಿದ್ದಾನೆ.
ಕಲಬುರಗಿಯ ಹಸನಾಪುರ ಮೂಲದ ಸದ್ಯ ಬೆಂಗಳೂರಿನ ವೈಟ್‌ಫೀಲ್ಡ್ ನಿವಾಸಿಯಾಗಿರುವ ವಿವಾಹಿತೆಯ ದೂರಿನ ಮೇರೆಗೆ ಮಡಿವಾಳಪ್ಪ ಅಮರಾವತಿ ವಿರುದ್ಧ ಪ್ರಕರಣ ದಾಖಲಾಗಿದೆ.
ದೂರುದಾರೆಯ ಸಹೋದರನಿಗೆ ಸಂಬಂಧಿಸಿದ ಹಳೆಯ ಪ್ರಕರಣವೊಂದರಲ್ಲಿ ಸಹಾಯ ಮಾಡುವ ನೆಪದಲ್ಲಿ ಪರಿಚಯಿಸಿಕೊಂಡಿದ್ದ. ಬಳಿಕ ಆರೋಪಿ ಆಕೆಗೆ ತಿಳಿಯದಂತೆ ಖಾಸಗಿ ಫೋಟೋಗಳನ್ನು ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾನೆ. ಯುವತಿಯ ವಿವಾಹದ ಬಳಿಕ ಕರೆ ಮಾಡಿ ಫೋಟೋಗಳನ್ನು ಪತಿಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಫೋಟೋಗಳನ್ನು ಅಳಿಸಬೇಕಾದರೆ ಹಣ ನೀಡಬೇಕು ಅಥವಾ ಕಲಬುರಗಿಗೆ ಬರಬೇಕು ಎಂದು ಒತ್ತಡ ಹೇರಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಜುಲೈ 11ರಂದು ಸಂಜೆ ಪಬ್ಲಿಕ್ ಗಾರ್ಡನ್‌ಗೆ ಬಂದಿದ್ದ ಯುವತಿಯನ್ನು ಆರೋಪಿ ತನ್ನ ಕಾರಿನಲ್ಲಿ ಶರಣನಗರದ ಕಡೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಾನೆ. ಯುವತಿ ಪೊಲೀಸರಿಗೆ ಕರೆ ಮಾಡುತ್ತಿದ್ದಂತೆ ಆರೋಪಿ ಕೂದಲು ಹಿಡಿದು ಎಳೆದಾಡಿ, ಕಪಾಳಕ್ಕೆ ಹೊಡೆದು ಜೀವ ಬೆದರಿಕೆ ಹಾಕಿದ್ದಾನೆ. ಬಳಿಕ ಪೊಲೀಸ್ ವಾಹನ ಸ್ಥಳಕ್ಕೆ ಬರುತ್ತಿರುವುದನ್ನು ಕಂಡು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಜುಲೈ 12ರಂದು ಈ ಕುರಿತು ಬ್ರಹ್ಮಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.






