Kalaburagi | ಕಾರು ಮಾರಾಟದ ಹಣ ದುರ್ಬಳಕೆ ಆರೋಪ: ಇಬ್ಬರು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು

ಕಲಬುರಗಿ : ಗ್ರಾಹಕರಿಗೆ ಕಾರುಗಳನ್ನು ಮಾರಾಟ ಮಾಡಿ ಬಂದ ಹಣವನ್ನು ಕಂಪನಿಯ ಖಾತೆಗೆ ಜಮೆ ಮಾಡದೆ ದುರ್ಬಳಕೆ ಮಾಡಿಕೊಂಡು, ನಂಬಿಕೆ ದ್ರೋಹ ಹಾಗೂ ವಂಚನೆ ಎಸಗಿದ ಆರೋಪದ ಮೇಲೆ ಇಬ್ಬರು ಸಿಬ್ಬಂದಿ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಹುಮನಾಬಾದ್ ರಸ್ತೆಯ ಕಪನೂರು ಕೈಗಾರಿಕಾ ಪ್ರದೇಶದಲ್ಲಿರುವ ಕುಮಾರ ಕಿಯಾ ಕಾರು ಮಾರಾಟ ಮಳಿಗೆಯ ವ್ಯವಸ್ಥಾಪಕ ಬಸವರಾಜ ಕಾಮನಳ್ಳಿ ಹಾಗೂ ಮಾರಾಟ ವ್ಯವಸ್ಥಾಪಕ ಭೀಮಾಶಂಕರ ಕುಂಬಾರ ವಿರುದ್ಧ ಪ್ರಕರಣ ದಾಖಲಾಗಿದೆ.
ಮಳಿಗೆಯ ಮಾಲೀಕ ರಾಜಕುಮಾರ ಭೀಮಾಶಂಕರ ಬಿಲಗುಂದಿ ಅವರು ನೀಡಿದ ದೂರಿನ ಪ್ರಕಾರ, ಆರೋಪಿಗಳು ಕಂಪನಿಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಅವರ ಮೇಲಿನ ವಿಶ್ವಾಸದಿಂದ ಮಳಿಗೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಲಾಗಿತ್ತು. ಗ್ರಾಹಕರಿಗೆ ಕಾರುಗಳನ್ನು ತೋರಿಸಿ, ನಿಗದಿತ ಮೊತ್ತಕ್ಕೆ ಮಾರಾಟ ಮಾಡಿ, ಬಂದ ಹಣವನ್ನು ಕಂಪನಿಯ ಖಾತೆಗೆ ಜಮೆ ಮಾಡುವುದು ಅವರ ಕರ್ತವ್ಯವಾಗಿತ್ತು.
2024ರ ಜೂನ್‌ನಿಂದ 2025ರ ಜೂನ್‌ವರೆಗೆ ಕಂಪನಿಯು ಒಟ್ಟು 2,15,89,996 ರೂ. ಗೆ 32 ಹಳೆಯ ಕಾರುಗಳನ್ನು ಖರೀದಿಸಿತ್ತು. ಈ ಕಾರುಗಳನ್ನು ಮಾರಾಟ ಮಳಿಗೆಯಲ್ಲಿ ಇರಿಸಲಾಗಿತ್ತು. ಆರೋಪಿಗಳು ಗ್ರಾಹಕರಿಗೆ ಕಾರುಗಳನ್ನು ಮಾರಾಟ ಮಾಡಿದ ಬಳಿಕ ಬಂದ ಹಣವನ್ನು ಕಂಪನಿಯ ಖಾತೆಗೆ ಜಮೆ ಮಾಡದೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಅಲ್ಲದೆ, ಕಂಪನಿಯ 30 ಹೊಸ ಕಿಯಾ ಕಾರುಗಳ ಮಾರಾಟದಲ್ಲಿಯೂ ವಂಚನೆ ನಡೆದಿದೆ. ಕಂಪನಿಗೆ ತಿಳಿಸಿದ ಮಾರಾಟದ ಮೊತ್ತ ಮತ್ತು ನೈಜ ಮಾರಾಟದ ಮೊತ್ತದ ನಡುವಿನ ವ್ಯತ್ಯಾಸದ ರೂಪದಲ್ಲಿ 57,35,014 ರೂ. ದುರ್ಬಳಕೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಳೆಯ ಮತ್ತು ಹೊಸ ಕಾರುಗಳ ಮಾರಾಟದ ಹಣ ಸೇರಿದಂತೆ ಒಟ್ಟು 2,73,25,014 ರೂ. ದುರ್ಬಳಕೆ ಮಾಡಿಕೊಂಡು ಕಂಪನಿಗೆ ನಷ್ಟ ಉಂಟುಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತು ವಿಚಾರಿಸಿದಾಗ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡು, 45 ದಿನಗಳೊಳಗೆ ಹಣವನ್ನು ಮರಳಿಸುವುದಾಗಿ 100 ರೂ. ಮೌಲ್ಯದ ಇ-ಸ್ಟಾಂಪ್‌ನಲ್ಲಿ ಸಾಕ್ಷಿಗಳ ಸಮ್ಮುಖದಲ್ಲಿ ಲಿಖಿತವಾಗಿ ಬರೆದುಕೊಟ್ಟಿದ್ದರು. ಆದರೆ, ಹಣವನ್ನು ಮರಳಿಸದೆ ದಿನಗಳನ್ನು ಮುಂದೂಡುತ್ತಿದ್ದರು. ಸೆಪ್ಟೆಂಬರ್ 26ರಿಂದ ದೂರವಾಣಿ ಕರೆಗಳಿಗೂ ಪ್ರತಿಕ್ರಿಯಿಸದೆ ವಂಚನೆ ಮುಂದುವರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ–2023ರ ಕಲಂ 316(4) ಮತ್ತು 318(4) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.






