Kalaburagi | ಕರ್ತವ್ಯ ನಿರ್ಲಕ್ಷ್ಯ ಆರೋಪ: ರಟಕಲ್ ಗ್ರಾಮ ಪಂಚಾಯತ್ ಪಿಡಿಒ ಅಮಾನತು

ಕಲಬುರಗಿ: ಕರ್ತವ್ಯ ನಿರ್ಲಕ್ಷ್ಯ, ಬೇಜವಾಬ್ದಾರಿ ಹಾಗೂ ಸೇವಾ ನಿಯಮಗಳ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಕಾಳಗಿ ತಾಲೂಕಿನ ರಟಕಲ್ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ (ಪಿಡಿಒ) ಜ್ಞಾನದೇವ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಸಂಕನೂರ ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕರಿಂದ ಬಂದಿದ್ದ ಹಲವು ದೂರುಗಳು ಹಾಗೂ ಆರೋಪಗಳ ಕುರಿತು ಪ್ರಾಥಮಿಕ ಪರಿಶೀಲನೆ ನಡೆಸಿದ ವೇಳೆ ಮೇಲ್ನೋಟಕ್ಕೆ ಆರೋಪಗಳಿಗೆ ಪೂರಕವಾದ ಅಂಶಗಳು ಕಂಡುಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿರುವುದು, ಆಡಳಿತಾತ್ಮಕ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸದಿರುವುದು ಹಾಗೂ ಸೇವಾ ನಿಯಮಗಳನ್ನು ಉಲ್ಲಂಘಿಸಿರುವ ಆರೋಪಗಳು ಅವರ ವಿರುದ್ಧ ಕೇಳಿಬಂದಿದ್ದವು.
ಈ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಪಿಡಿಒ ಜ್ಞಾನದೇವ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಸಂಕನೂರ ತಿಳಿಸಿದ್ದಾರೆ.




