ಕಲಬುರಗಿ| ವಿಜ್ಞಾನೇಶ್ವರ ಕಾನೂನು ಮಹಾವಿದ್ಯಾಲಯದಲ್ಲಿ ವಾರ್ಷಿಕ ಸಮ್ಮೇಳನ

ಕಲಬುರಗಿ: ಬದುಕಿನಲ್ಲಿ ಯಶಸ್ಸು ಪಡೆಯಲು ಕೇವಲ ಓದಿದರೆ ಸಾಲದು. ಅದಕ್ಕೆ ಸತತ ಪ್ರಯತ್ನ ಬೇಕು. ಬದುಕಿನ ದಾರಿ ಬಗ್ಗೆ ಸ್ಪಷ್ಟ ಕಲ್ಪನೆ ಹಾಗೂ ನಿರ್ದಿಷ್ಟ ಯೋಜನೆಗಳಿರಬೇಕು ಎಂದು ಲೇಖಕ ಡಾ.ಶಿವರಂಜನ ಸತ್ಯಂಪೇಟೆ ಹೇಳಿದರು.
ಗುಲ್ಬಾರ್ಗ ವಿಶ್ವವಿದ್ಯಾಲಯ ಆವರಣದಲ್ಲಿರುವ ಕಾಲೇಜು ಶಿಕ್ಷಣ ಇಲಾಖೆಯ ವಿಜ್ಞಾನೇಶ್ವರ ಸರ್ಕಾರಿ ಕಾನೂನು ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ 2024-25ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಸರ್ಕಾರಿ ಸ್ವಾಯತ್ತ ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ.ಶ್ರೀಮಂತ ಬಿ. ಹೋಳ್ಕರ್ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಪ್ರತಿಭಾವಂತರಿದ್ದಾರೆ. ಸತತ ಪ್ರಯತ್ನವಿಲ್ಲದಿರುವುದರಿಂದ ಫಲಿತಾಂಶದಲ್ಲಿ ಇಳಿಕೆ ಕಂಡು ಬರುತ್ತಿದೆ. ಆದರೂ ಕೆಸರಿನಲ್ಲಿ ಕಮಲ ಅರಳುವಂತೆ ಈ ಭಾಗದ ವಿದ್ಯಾರ್ಥಿಗಳು ಓದುವ, ಬರೆಯುವ ತಂತ್ರವನ್ನು ಸರಿಯಾಗಿ ಬಳಸಿಕೊಂಡು ಭವಿಷ್ಯ ಕಟ್ಟಿಕೊಳ್ಳಬೇಕು ಎಂದು ಕರೆ ನೀಡಿದರು.
ಅತಿಥಿಯಾಗಿದ್ದ ಜೇವರ್ಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ. ಶರಣಪ್ಪ ಸೈದಾಪುರ, ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಶಿವಾನಂದ ಎಚ್.ಲೇಂಗಟಿ ಮಾತನಾಡಿದರು.
ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಹಾಗೂ ಸಹಾಯಕ ಪ್ರಾಧ್ಯಾಪಕಿ ಡಾ.ರೇಣುಕಾ ಸಾಸನಮರಿ, ಸಾಂಸ್ಕೃತಿಕ ಕ್ರೀಡಾ ಸಮಿತಿ ಸಂಚಾಲಕಿ ಹಾಗೂ ಸಹಾಯಕ ಪ್ರಾಧ್ಯಾಪಕಿ ಡಾ.ಆಶಾ ಅಫ್ರೀನ್ ವೇದಿಕೆಯಲ್ಲಿದ್ದರು.
ಇದೇ ವೇಳೆಯಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕುದರಿಹಾಳ ನಿಂಗಪ್ಪ ಸ್ವಾಗತಿಸಿ ನಿರೂಪಿಸಿದರು. ಶ್ರಾವಣಿ ಪ್ರಾರ್ಥನೆಗೀತೆ ಹಾಡಿದರು. ಡಾ.ಸೇವಂತಾ ವಂದಿಸಿದರು. ವಾಣಿ ಮರಡಿ, ಡಾ.ವೀಣಾ ಅಂಕದ, ಡಾ.ಗಿರೀಶ ಇತರರಿದ್ದರು.