ಕಲಬುರಗಿ | ಪೊಲೀಸ್ ಇಲಾಖೆಯಿಂದ ಡ್ರಗ್ಸ್ ವಿರೋಧಿ ಜನಜಾಗೃತಿ ಕಾರ್ಯಕ್ರಮ

ಅಫಜಲಪುರ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ "ಡ್ರಗ್ಸ್ ಮುಕ್ತ ಕರ್ನಾಟಕ – ಆಪರೇಶನ್ ರೈಸ್-66" ಹಾಗೂ "ಬೇಡ BRO" ಅಭಿಯಾನದ ಅಂಗವಾಗಿ ಅಫಜಲಪುರ ಪಟ್ಟಣದ ಶ್ರೀ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಶನಿವಾರ ಡ್ರಗ್ಸ್ ವಿರೋಧಿ ಜನಜಾಗೃತಿ ಕಾರ್ಯಕ್ರಮ ನಡೆಯಿತು.
ಕಲಬುರಗಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ, ಆಳಂದ ಉಪವಿಭಾಗ ಹಾಗೂ ಅಫಜಲಪುರ ಪೊಲೀಸ್ ಠಾಣೆಯ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ "ಡ್ರಗ್ಸ್‌ಗೆ ಬೇಡ ಎಂದು ಹೇಳಿ, ತಿರಸ್ಕರಿಸಿ, ತಿಳಿಸಿ, ಬೆಂಬಲ ನೀಡಿ ಹಾಗೂ ಸಬಲೀಕರಣಗೊಳಿಸಿ" ಎಂಬ ಸಂದೇಶವನ್ನು ಸಾರಲಾಯಿತು. ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿ, ಕುಟುಂಬ ಹಾಗೂ ಸಮಾಜದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ವಿವರಿಸಿದ ಅಧಿಕಾರಿಗಳು, ಡ್ರಗ್ಸ್ ಮಾರಾಟ ಅಥವಾ ಬಳಕೆಯ ಕುರಿತು ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣ ಪೊಲೀಸ್ ಇಲಾಖೆಗೆ ತಿಳಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಿಪಿಐ ಲಖನ್ ಮಸಗುಪ್ಪಿ, ಪಿಎಸ್‌ಐ ಸಂಗಮೇಶ ಅಂಗಡಿ, ಪೊಲೀಸ್ ಸಿಬ್ಬಂದಿ, ಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದೇ ವೇಳೆ "ಬೇಡ BRO – ಡ್ರಗ್ಸ್‌ಗೆ ಬೇಡ, ಉತ್ತಮ ಬದುಕಿಗೆ ಹೌದು" ಎಂಬ ಘೋಷಣೆಯೊಂದಿಗೆ ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಸಂಕಲ್ಪ ಮಾಡಿದರು.






