Kalaburagi | NEET ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ದಲಿತ ವಿದ್ಯಾರ್ಥಿ ಪರಿಷತ್‌ನಿಂದ ಮನವಿ

ಕಲಬುರಗಿ: ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ನಡೆಯುವ ನೀಟ್ ಪರೀಕ್ಷೆಯಲ್ಲಿ ಪದೇ ಪದೇ ನಡೆಯುತ್ತಿರುವ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಕ್ರಮಗಳನ್ನು ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಬುಧವಾರ ಪ್ರಧಾನಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಪತ್ರ ಸಲ್ಲಿಸಲಾಯಿತು.
ಬಳಿಕ ಮಾತನಾಡಿದ ಪರಿಷತ್ತಿನ ರಾಜ್ಯ ಸಂಚಾಲಕ ಬಾಲಾಜಿ ಎಂ. ಕಾಂಬಳೆ, ಕಳೆದ ಕೆಲವು ವರ್ಷಗಳಿಂದ ನೀಟ್ ಪರೀಕ್ಷೆಯ ಸುತ್ತ ನಿರಂತರವಾಗಿ ಅಕ್ರಮಗಳ ಆರೋಪಗಳು ಕೇಳಿಬರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ಒಂದು ವ್ಯವಸ್ಥಿತ ಜಾಲವಾಗಿ ರೂಪುಗೊಂಡಿರುವುದು ಶಿಕ್ಷಣ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆಯಾಗಿದೆ ಎಂದು ಹೇಳಿದರು.
ಈ ಬಾರಿ ನಡೆದ ಪರೀಕ್ಷೆ ರದ್ದತಿಯಿಂದ ಲಕ್ಷಾಂತರ ವಿದ್ಯಾರ್ಥಿಗಳ ಶ್ರಮ ವ್ಯರ್ಥವಾಗಿದ್ದು, ಅವರ ಭವಿಷ್ಯ ಅನಿಶ್ಚಿತತೆಯತ್ತ ಸಾಗುತ್ತಿದೆ. ಪದೇ ಪದೇ ನಡೆಯುತ್ತಿರುವ ಇಂತಹ ಘಟನೆಗಳಿಂದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮೇಲಿನ ಸಾರ್ವಜನಿಕರ ನಂಬಿಕೆ ಕುಸಿಯುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ನೀಟ್ ಪರೀಕ್ಷೆಯಲ್ಲಿ ನಡೆದಿರುವ ಸರಣಿ ಅಕ್ರಮಗಳ ಕುರಿತು ಉನ್ನತ ಮಟ್ಟದ ನ್ಯಾಯಾಂಗ ತನಿಖೆ ನಡೆಸಬೇಕು. ಪರೀಕ್ಷಾ ಮಾಫಿಯಾದಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ಹಾಗೂ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಿ, ತಪ್ಪಿತಸ್ಥರಿಗೆ ಕಠಿಣ ಜೈಲು ಶಿಕ್ಷೆ ವಿಧಿಸಬೇಕು ಎಂದು ಅವರು ಒತ್ತಾಯಿಸಿದರು.
“ದೇಶಕ್ಕೆ ವೈದ್ಯರನ್ನು ನೀಡುವ ಪವಿತ್ರ ಪರೀಕ್ಷೆಯಲ್ಲೇ ಭ್ರಷ್ಟಾಚಾರ ನುಸುಳಿರುವುದು ದೇಶದ ಆರೋಗ್ಯ ವ್ಯವಸ್ಥೆಯ ಮೇಲೂ ದುಷ್ಪರಿಣಾಮ ಬೀರುತ್ತದೆ. ಒಂದು ಬಾರಿ ತಪ್ಪಾದರೆ ಅದು ಅಚಾತುರ್ಯ ಎನ್ನಬಹುದು. ಆದರೆ ಪದೇ ಪದೇ ಪ್ರಶ್ನೆಪತ್ರಿಕೆ ಸೋರಿಕೆಯಾಗುತ್ತಿರುವುದು ವ್ಯವಸ್ಥೆಯ ವೈಫಲ್ಯವನ್ನು ತೋರಿಸುತ್ತದೆ. ಈ ಕುರಿತು ಸರ್ಕಾರ ತಕ್ಷಣ ಕಠಿಣ ಕಾನೂನು ರೂಪಿಸಬೇಕು,” ಎಂದು ಬಾಲಾಜಿ ಎಂ. ಕಾಂಬಳೆ ಹೇಳಿದರು.
ಈ ಸಂದರ್ಭದಲ್ಲಿ ಪರಿಷತ್ ನಗರ ಘಟಕದ ಅಧ್ಯಕ್ಷ ಸಚಿನ್, ಮುಖಂಡರಾದ ವೈ.ಎಸ್. ಸಿಂದಗೇರಿ ಹಾಗೂ ವಿದ್ಯಾರ್ಥಿಗಳಾದ ಆದಿತ್ಯ ಗೊಬ್ಬೆವಾಡ, ಮಹಮದ್ ಅಸ್ಲಮ್, ಬುರಮ್ಮ ಮತ್ತು ಚನ್ನು ಉಪಸ್ಥಿತರಿದ್ದರು.






