ಕಲಬುರಗಿ | ಅನುದಾನಿತ ಶಾಲೆಗಳಲ್ಲಿ ಶಾಲಾ ಬ್ಯಾಗ್ ಭಾರ ಕಡಿಮೆಗೊಳಿಸುವಂತೆ ಮನವಿ

ಕಲಬುರಗಿ: ಕಲ್ಯಾಣ-ಕರ್ನಾಟಕ ಭಾಗದ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಭಾರ ಕಡಿಮೆಗೊಳಿಸುವಂತೆ ಆದೇಶ ಹೊರಡಿಸಬೇಕೆಂದು ಲೋಕ ರಕ್ಷಕ್ ಅಧ್ಯಕ್ಷ ದಯಾನಂದ ಯಂಕಂಚಿ ಅವರ ನೇತೃತ್ವದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಕಲಬುರಗಿ ಜಿಲ್ಲೆಯೂ ಒಳಗೊಂಡಂತೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಾದ ಯಾದಗಿರಿ, ರಾಯಚೂರು, ಬೀದರ್, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಶಾಲಾ ಮಕ್ಕಳಿಗೆ ಅತಿ ಭಾರವಾದ ಶಾಲಾ ಬ್ಯಾಗ್ ಹೊರುವ ಅನಿವಾರ್ಯತೆ ಸೃಷ್ಟಿಸಲಾಗಿದೆ. ಆಯಾದಿನದ ಪಠ್ಯಗಳಿಗೆ ಅನುಗುಣವಾಗಿ ಇಂತಿಷ್ಟೇ ಪಠ್ಯಪುಸ್ತಕ ಹಾಗೂ ನೋಟ್ಬುಕ್ ಶಾಲೆಗೆ ತರುವಂತೆ ನಿರ್ದೇಶನ ನೀಡಬೇಕಾದ ಆಯಾ ಶಾಲೆಯ ಆಡಳಿತ ಮಂಡಳಿ ಹಾಗೂ ಶಾಲೆಯ ಶೈಕ್ಷಣಿಕ ಮುಖ್ಯಸ್ಥರು ಈ ನಿಟ್ಟಿನಲ್ಲಿ ಸಂಪೂರ್ಣವಾಗಿ ಸೋತಿದ್ದಾರೆ. ಪ್ರತಿನಿತ್ಯ ಸುಮಾರು 10ರಿಂದ 15 ಕಿ.ಗ್ರಾಂ. ತೂಕ ಇರುವ ಶಾಲಾ ಬ್ಯಾಗ್ ಹೊರುವ ಅಸಹಾಯಕ ಸ್ಥಿತಿಯನ್ನು ಮಕ್ಕಳು ಎದುರಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಶಾಲಾ ಮಕ್ಕಳಿಗೆ ಅತಿಯಾದ ಭಾರವಾದ ಬ್ಯಾಗ್ ಹೊರುವುದರಿಂದ ಮುಕ್ತಿ ನೀಡುವ ಭಾಗವಾಗಿ ಆಯಾ ಶಾಲೆಗಳಲ್ಲಿ ಮರುದಿನ ತರಬೇಕಾದ ಪುಸ್ತಕಗಳನ್ನು ಮಾತ್ರ ಮಕ್ಕಳು ಮನೆಗೆ ಕೊಂಡೊಯ್ದು ಹಿಂದಿರುಗಿ ತರುವಂತೆ ಆಯಾ ಶಾಲೆಯಲ್ಲಿ ಲಾಕರ್ ವ್ಯವಸ್ಥೆ ಅಳವಡಿಸಿಕೊಳ್ಳುವಂತೆ ನಿರ್ದೇಶನ ನೀಡಬೇಕು. ಮೇಲಾಗಿ, ಭಾರವಾದ ಶಾಲಾ ಬ್ಯಾಗ್ ಹೊರುವುದರಿಂದ ಮಕ್ಕಳಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳ ಕುರಿತಾಗಿ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಆಯಾ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ತಾಲೂಕು ಹಂತದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಜೋತ ಕದಮ್, ಪ್ರಕಾಶ ಪಟ್ಟೇದಾರ ಸೇರಿದಂತೆ ಮತ್ತಿತರರು ಇದ್ದರು.







