Kalaburagi | ಉಜ್ಜನಿ ಜಲಾಶಯದಿಂದ ನೀರು ಬಿಡುಗಡೆಗೆ ಆಗ್ರಹಿಸಿ ಮುಖ್ಯಮಂತ್ರಿಗೆ ಮನವಿ

ಕಲಬುರಗಿ: ರೈತರು, ಕಬ್ಬು ಬೆಳೆಗಾರರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಲಬುರಗಿ ಜಿಲ್ಲಾ ಘಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸಮಗ್ರ ಮನವಿ ಸಲ್ಲಿಸಿತು.
ಜಿಲ್ಲಾ ಅಧ್ಯಕ್ಷ ರಮೇಶ್ ಎಸ್. ಹೂಗಾರ್ ನೇತೃತ್ವದಲ್ಲಿ ಸಲ್ಲಿಸಿದ ಮನವಿಯಲ್ಲಿ, ಜಿಲ್ಲೆಯಾದ್ಯಂತ ಮಳೆಯ ಕೊರತೆಯಿಂದ ತೀವ್ರ ಬರದ ಪರಿಸ್ಥಿತಿ ನಿರ್ಮಾಣವಾಗಿದ್ದು, ಭೀಮಾ ನದಿಯಲ್ಲಿ ನೀರಿನ ಹರಿವು ಕುಂಠಿತಗೊಂಡಿರುವುದರಿಂದ ರೈತರು, ಜನಜಾನುವಾರುಗಳು ಹಾಗೂ ಗ್ರಾಮೀಣ ಪ್ರದೇಶದ ಜನರು ಕುಡಿಯುವ ನೀರಿನ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಆದ್ದರಿಂದ ಮಹಾರಾಷ್ಟ್ರದ ಉಜ್ಜನಿ ಜಲಾಶಯದಿಂದ ಭೀಮಾ ನದಿಗೆ ತಕ್ಷಣ ನೀರು ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ನಿರಂತರ ಮಳೆ ಅಭಾವ ಹಾಗೂ ಬೆಳೆ ಹಾನಿಯನ್ನು ಪರಿಗಣಿಸಿ ಕಲಬುರಗಿ ಜಿಲ್ಲೆಯನ್ನು ತಕ್ಷಣವೇ ಬರಪೀಡಿತ ಜಿಲ್ಲೆ ಎಂದು ಘೋಷಿಸಿ, ಮೂಡಬಿತ್ತನೆ ಸೇರಿದಂತೆ ರೈತರಿಗೆ ಅಗತ್ಯ ನೆರವು ಒದಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಕಳೆದ ವರ್ಷದ ಬೆಳೆ ವಿಮೆ ಪರಿಹಾರ ಇನ್ನೂ ಅನೇಕ ರೈತರ ಖಾತೆಗೆ ಜಮೆಯಾಗಿಲ್ಲ. ಅರ್ಹ ರೈತರಿಗೆ ಕೂಡಲೇ ವಿಮೆ ಪರಿಹಾರ ಬಿಡುಗಡೆ ಮಾಡಬೇಕು. ಜೊತೆಗೆ ರಸಗೊಬ್ಬರ ಖರೀದಿಗೆ ಕಡ್ಡಾಯಗೊಳಿಸಿರುವ ಎಫ್‌ಐಡಿ (FID) ವ್ಯವಸ್ಥೆಯನ್ನು ರದ್ದುಗೊಳಿಸುವಂತೆ ಸಂಘ ಒತ್ತಾಯಿಸಿದೆ.
ಸಂಕಷ್ಟದಲ್ಲಿರುವ ರೈತರ ಕೃಷಿ ಸಾಲ ಮನ್ನಾ ಮಾಡಬೇಕು. ಅಲ್ಲದೆ, ಸಕ್ಕರೆ ಕಾರ್ಖಾನೆಗಳು ಆರಂಭವಾಗುವ ಕನಿಷ್ಠ ಒಂದು ತಿಂಗಳ ಮುಂಚಿತವಾಗಿ ಕಬ್ಬಿನ ನ್ಯಾಯಸಮ್ಮತ ಬೆಲೆಯನ್ನು ಸರ್ಕಾರ ನಿಗದಿಪಡಿಸಬೇಕು. ಇದರಿಂದ ರೈತರಿಗೆ ಕಟಾವು ಮತ್ತು ಸಾಗಾಣಿಕೆ ಯೋಜನೆ ರೂಪಿಸಿಕೊಳ್ಳಲು ಅನುಕೂಲವಾಗಲಿದೆ ಎಂದು ಸಂಘ ಮನವಿಯಲ್ಲಿ ತಿಳಿಸಿದೆ.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ರಮೇಶ್ ಎಸ್. ಹೂಗಾರ್, ಭಾಗಣ್ಣ ಕೋಬಾಳ್, ಧರ್ಮರಾಜ ಸಾಹು, ಶರಣು ಮಗಾ, ಕರಬಸಪ್ಪ, ಸಂತೋಷ್ ಪಾಟೀಲ್, ಬಸವರಾಜ್ ಮಾಲು, ರೇವಣಸಿದ್ದಯ್ಯ, ಲಕ್ಷ್ಮಿಪುತ್ರ ಸೇರಿದಂತೆ ಹಲವರಿದ್ದರು.






