ಕಲಬುರಗಿ | ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನ ಯೋಜನೆಯಡಿ ಅರ್ಜಿ ಆಹ್ವಾನ

ಕಲಬುರಗಿ: ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ 2025-26ನೇ ಸಾಲಿಗೆ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ಸೇರಿದ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್ ಮತ್ತು ಪಾರ್ಸಿ) ವಿದ್ಯಾರ್ಥಿಗಳಿಂದ ವಿದ್ಯಾರ್ಥಿವೇತನ ಯೋಜನೆಯಡಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ಅರ್ಹ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು 15 ಲಕ್ಷ ರೂ. ಮೀರಿರಬಾರದು. ಕೋರ್ಸ್ ಪೂರ್ಣಕಾಲಿಕ ಸ್ನಾತಕೋತ್ತರ ಇರಬೇಕು. ವಿದ್ಯಾರ್ಥಿಗಳ ಗರಿಷ್ಠ ವಯೋಮಿತಿ 38 ವರ್ಷ ಮೀರಬಾರದು. ವಿದ್ಯಾರ್ಥಿ ವ್ಯಾಸಂಗ ಮಾಡುತ್ತಿರುವ ವಿದೇಶಿ ವಿಶ್ವವಿದ್ಯಾಲಯವು ಕ್ಯೂಎಸ್ ಟಾಪ್ 500 ಯುನಿವರ್ಸಿಟಿ ರ್ಯಾಂಕಿಂಗ್ (QS Top 500 University Ranking) ಪಟ್ಟಿಯಲ್ಲಿ ಸ್ಥಾನ ಪಡೆದಿರಬೇಕು.
ಅರ್ಜಿದಾರರು https:/sevasindhu.karnataka.gov.in/sevasindhu/Departmentservices ಲಿಂಕ್ ನಲ್ಲಿ ಆನ್‍ಲೈನ್ ಮೂಲಕ 2025ರ ಸೆಪ್ಟೆಂಬರ್ 30 ರೊಳಗಾಗಿ ಅರ್ಜಿ ಸಲ್ಲಿಸಬೇಕು. ನಂತರ ಅರ್ಜಿ ಸಲ್ಲಿಸಿದ ಪ್ರತಿಯನ್ನು ಅಗತ್ಯ ದಾಖಲೆಗಳೊಂದಿಗೆ ಅಲ್ಪಸಂಖ್ಯಾತರ ನಿರ್ದೆಶನಾಲಯ, ನಂ-16ಸಿ, ಮೌಲಾನಾ ಅಬ್ದುಲ್ ಕಲಂ ಆಜಾದ್ ಭವನ, ಮಿಲ್ಲರ್ ಟ್ಯಾಂಕ್ ಬೆಡ್‍ರಸ್ತೆ, ವಸಂತನಗರ ಬೆಂಗಳೂರು-560052 ಇಲ್ಲಿಗೆ ನಿಗದಿತ ದಿನಾಂಕದೊಳಗಾಗಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧಿಕೃತ ಜಾಲತಾಣ htts://dom.karnataka.gov.in ವನ್ನು ಸಂಪರ್ಕಿಸಲು ಕೋರಲಾಗಿದೆ.







