Kalaburagi | ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯಡಿ ರೈತರಿಂದ ಅರ್ಜಿ ಆಹ್ವಾನ

ಕಲಬುರಗಿ : 2026-27ನೇ ಸಾಲಿನ ಕೃಷಿ ಇಲಾಖೆಯ ಹೈಟೆಕ್ ಹಾರ್ವೆಸ್ಟರ್ ಹಬ್ (ಶುಗರ್ ಕೇನ್ ಹಾರ್ವೆಸ್ಟರ್ ಹಾಗೂ ಕಂಬೈನ್ ಹಾರ್ವೆಸ್ಟರ್) ಯೋಜನೆಯಡಿ ಆಸಕ್ತ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಯೋಜನೆಯಡಿ ಸಾಮಾನ್ಯ ರೈತರಿಗೆ ಗರಿಷ್ಠ ಶೇ.50, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ರೈತರಿಗೆ ಶೇ.70 ಹಾಗೂ ಎಫ್‌ಪಿಒ ಸೇರಿದಂತೆ ಸಂಘ-ಸಂಸ್ಥೆಗಳಿಗೆ ಶೇ.70ರಷ್ಟು ಕ್ರೆಡಿಟ್ ಲಿಂಕ್ಡ್ ಬ್ಯಾಕ್‌ಎಂಡೆಡ್ ಸಬ್ಸಿಡಿ ನೀಡಲಾಗುತ್ತದೆ.
ಈ ಹಂತದಲ್ಲಿ ಶುಗರ್ ಕೇನ್ ಹಾರ್ವೆಸ್ಟರ್‌ಗೆ ಪರಿಶಿಷ್ಟ ಜಾತಿ ವರ್ಗದ ಒಂದು ಘಟಕ ಹಾಗೂ ಕಂಬೈನ್ ಹಾರ್ವೆಸ್ಟರ್‌ಗೆ ಸಾಮಾನ್ಯ ವರ್ಗದ ಒಂದು ಮತ್ತು ಪರಿಶಿಷ್ಟ ಜಾತಿ ವರ್ಗದ ಒಂದು ಘಟಕ ಮಂಜೂರಾಗಿವೆ.
ಅರ್ಜಿ ಸಲ್ಲಿಸುವ ರೈತರು ಭರ್ತಿ ಮಾಡಿದ ಅರ್ಜಿಯೊಂದಿಗೆ ಆಧಾರ್ ಕಾರ್ಡ್, ಎಫ್‌ಐಡಿ ಸಂಖ್ಯೆ, ಭಾವಚಿತ್ರ, ಬ್ಯಾಂಕ್ ಪಾಸ್‌ಬುಕ್ ಪ್ರತಿ, ಸಂಬಂಧಿತ ಬ್ಯಾಂಕ್‌ನಿಂದ In Principle Loan Sanction Letter ಹಾಗೂ ರೂ.100 ಬಾಂಡ್ ಪೇಪರ್‌ನಲ್ಲಿ ನೋಟರಿ ಮಾಡಿಸಿದ ಮುಚ್ಚಳಿಕೆಯನ್ನು ಸಲ್ಲಿಸಬೇಕು.
ಆಸಕ್ತ ರೈತರು ಅಗತ್ಯ ದಾಖಲಾತಿಗಳೊಂದಿಗೆ ಜುಲೈ 31ರೊಳಗೆ ಕಲಬುರಗಿ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.






