Kalaburagi | ನ್ಯಾಯಾಲಯಗಳಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಜಿ ಅಹ್ವಾನ

ಕಲಬುರಗಿ : ಜಿಲ್ಲೆಯ ನ್ಯಾಯಾಲಯಗಳಲ್ಲಿ ಖಾಲಿಯಿರುವ ವಿವಿಧ 47 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜಿ.ಎಲ್. ಲಕ್ಷ್ಮೀನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ಸ್ಥಳೀಯ ಹಾಗೂ ಮಿಕ್ಕುಳಿದ ವೃಂದಗಳಲ್ಲಿ ಖಾಲಿಯಿರುವ ವಾಹನ ಚಾಲಕ, ಜವಾನ್, ಆದೇಶ ಜಾರಿಕಾರರು, ಶೀಘ್ರಲಿಪಿಗಾರ ಗ್ರೇಡ್-3, ಬೆರಳಚ್ಚು-ನಕಲುಗಾರರು ಹಾಗೂ ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ ಹೀಗಿದೆ: ಕಲ್ಯಾಣ ಕರ್ನಾಟಕ ಮಿಕ್ಕುಳಿದ ವೃಂದದಲ್ಲಿ ಒಂದು ವಾಹನ ಚಾಲಕ ಹುದ್ದೆ, ಸ್ಥಳೀಯ ವೃಂದದಲ್ಲಿ 15 ಜವಾನ್ ಹುದ್ದೆಗಳು ಹಾಗೂ ಮಿಕ್ಕುಳಿದ ವೃಂದದಲ್ಲಿ ನಾಲ್ಕು ಜವಾನ್ ಹುದ್ದೆಗಳು, ಸ್ಥಳೀಯ ವೃಂದದಲ್ಲಿ ಆರು ಆದೇಶ ಜಾರಿಕಾರರ ಹುದ್ದೆಗಳು, ಸ್ಥಳೀಯ ವೃಂದದಲ್ಲಿ ಐದು ಶೀಘ್ರಲಿಪಿಗಾರ ಗ್ರೇಡ್-3 ಹುದ್ದೆಗಳು ಹಾಗೂ ಮಿಕ್ಕುಳಿದ ವೃಂದದಲ್ಲಿ ಒಂದು ಶೀಘ್ರಲಿಪಿಗಾರ ಗ್ರೇಡ್-3 ಹುದ್ದೆ, ಸ್ಥಳೀಯ ವೃಂದದಲ್ಲಿ ಮೂರು ಬೆರಳಚ್ಚು-ನಕಲುಗಾರರ ಹುದ್ದೆಗಳು, 10 ಬೆರಳಚ್ಚುಗಾರರ ಹುದ್ದೆಗಳು ಹಾಗೂ ಮಿಕ್ಕುಳಿದ ವೃಂದದಲ್ಲಿ ಎರಡು ಬೆರಳಚ್ಚುಗಾರರ ಹುದ್ದೆಗಳು ಸೇರಿವೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆಯು 2026ರ ನವೆಂಬರ್ 16ರಿಂದ ಆರಂಭವಾಗಿದ್ದು, ಅರ್ಹ ಅಭ್ಯರ್ಥಿಗಳು ಕಲಬುರಗಿ ಜಿಲ್ಲಾ ನ್ಯಾಯಾಲಯದ ಅಧಿಕೃತ ವೆಬ್‌ಸೈಟ್ https://kalaburagi.dcourts.gov.in/Judges/online-recruitment/ ಮೂಲಕ ಡಿಸೆಂಬರ್ 15ರ ರಾತ್ರಿ 11.59 ಗಂಟೆಯೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಶುಲ್ಕ ಪಾವತಿಸಲು ಡಿಸೆಂಬರ್ 17 ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿಯೇ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ನಿಗದಿತ ಶುಲ್ಕವನ್ನು ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ನೀಡಿರುವ ಲಿಂಕ್ ಮೂಲಕ ಭಾರತೀಯ ಸ್ಟೇಟ್ ಬ್ಯಾಂಕ್‌ನ ಎಸ್‌ಬಿಐ ಕಲೆಕ್ಟ್ ವ್ಯವಸ್ಥೆಯಲ್ಲಿ ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ಯುಪಿಐ ಮೂಲಕ ಪಾವತಿಸಬೇಕು. ಇದನ್ನು ಹೊರತುಪಡಿಸಿ ಯಾವುದೇ ಚಲನ್, ಡಿಮ್ಯಾಂಡ್ ಡ್ರಾಫ್ಟ್, ಪೋಸ್ಟಲ್ ಆರ್ಡರ್ ಅಥವಾ ಮನಿ ಆರ್ಡರ್ ಸ್ವೀಕರಿಸಲಾಗುವುದಿಲ್ಲ. ಶುಲ್ಕ ಪಾವತಿಸದ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಕಚೇರಿಯೊಂದಿಗೆ ಯಾವುದೇ ಪತ್ರ ವ್ಯವಹಾರ ನಡೆಸಲು ಅವಕಾಶವಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಧಿಸೂಚನೆ, ಆಯ್ಕೆ ವಿಧಾನ, ವಿದ್ಯಾರ್ಹತೆ, ವಯೋಮಿತಿ, ಮೀಸಲಾತಿ ಹಾಗೂ ಇತರ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ನ್ಯಾಯಾಲಯದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಅಲ್ಲದೆ, ಕಲಬುರಗಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ನ್ಯಾಯಾಲಯದ ಕಚೇರಿಯನ್ನು ಅಥವಾ 08472-221856 ದೂರವಾಣಿ ಸಂಖ್ಯೆಯನ್ನು ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.






