ಕಲಬುರಗಿ | ಅರ್ಜುನ್ ಭದ್ರೆ ನೇತೃತ್ವದಲ್ಲಿ ಮನುಸ್ಮೃತಿ ದಹಿಸಿ ಪ್ರತಿಭಟನೆ

ಕಲಬುರಗಿ : ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ)ಯ ರಾಜ್ಯ ಸಂಚಾಲಕ ಅರ್ಜುನ್ ಭದ್ರೆ ಅವರ ನೇತೃತ್ವದಲ್ಲಿ ನಗರದ ಜಗತ್ ವೃತ್ತದಲ್ಲಿರುವ ಅಂಬೇಡ್ಕರ್ ಮೂರ್ತಿ ಎದುರು ಮನುಸ್ಮೃತಿ ಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ನಗರದ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ವೃತ್ತದಿಂದ ಶುರುವಾದ ಪ್ರತಿಭಟನಾ ಮೆರವಣಿಗೆ ಜಗತ್ ವೃತ್ತದವರೆಗೂ ನಡೆಯಿತು. ಬಳಿಕ ಜಗತ್ ವೃತ್ತದಲ್ಲಿ ಸಂಘಟನೆಯ ಮುಖಂಡರು ಮನುಸ್ಮೃತಿ ಪ್ರತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಸಂಚಾಲಕ ಅರ್ಜುನ್ ಭದ್ರೆ, ಮಹಿಳೆಯರಿಗೆ, ಶೂದ್ರರಿಗೆ ಕೆಟ್ಟದಾಗಿ ತೋರಿಸಿರುವ ಮನುಸ್ಮೃತಿಯನ್ನು ದಹನ ಮಾಡಿರುವ ದಿನವಾದ ಇಂದು ಸಾಂಕೇತಿಕವಾಗಿ ಸುಡಲಾಗಿದೆ, ಮನುಸ್ಮೃತಿ ಇಂದು ಯುವಜನಾಂಗದ ಮನಸ್ಸಿನಲ್ಲಿ ಅಡಗಿ ಕುಳಿತಿದೆ, ಹುಬ್ಬಳ್ಳಿಯಲ್ಲಿ ಆಗಿರುವ ಮರ್ಯಾದೆ ಹತ್ಯೆ ನಿಜಕ್ಕೂ ಘೋರ. ತನ್ನ ಮಗಳನ್ನೇ ತಂದೆಯೊಬ್ಬ ಭೀಕರವಾಗಿ ಹತ್ಯೆ ಮಾಡುತ್ತಾನೆ ಎಂದರೆ ಇದು ಜಾತಿಯತೆ ಎಷ್ಟೊಂದು ಭಯಂಕರ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ್ ಖನ್ನಾ, ಮಲ್ಲಿಕಾರ್ಜುನ್ ಕ್ರಾಂತಿ, ಮರಿಯಪ್ಪ ಹಳ್ಳಿ, ಮಹಾಂತೇಶ್ ಬದದಾಳ, ಸೂರ್ಯಕಾಂತ್ ಅಜಾದಪೂರ, ಮಹೇಶ್ ಕೋಕಿಲೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.





