ಕಲಬುರಗಿ | ಕೃತಕ ಬುದ್ದಿಮತ್ತೆ ಮಾನವನನ್ನು ಮೀರಿಸಲು ಸಾಧ್ಯವಿಲ್ಲ: ಡಾ.ಅಜಯ್ ಸಿಂಗ್
ಕಲ್ಯಾಣ ಕರ್ನಾಟಕ ಮೀಡಿಯಾ ಹಬ್ಬ-2025

ಕಲಬುರಗಿ : ವಿಶ್ವದಾದ್ಯಂತ ಚರ್ಚೆಗೆ ಕಾರಣವಾಗಿರುವ ಕೃತಕ ಬುದ್ದಿಮತ್ತೆ ಮಾನವನನ್ನು ಮೀರಿಸಲು ಸಾಧ್ಯವಿಲ್ಲ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಹ ಮಾನವನ ಸೃಷ್ಠಿಯೇ ಆಗಿದೆ ಎಂಬುದನ್ನು ಯಾರು ಮರೆಯಬಾರದು ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಹೇಳಿದರು.
ಸೋಮವಾರ ಇಲ್ಲಿನ ಶರಣಬಸವ ವಿಶ್ವವಿದ್ಯಾಲಯದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಆಯೋಜಿಸಿದ “ಕಲ್ಯಾಣ ಕರ್ನಾಟಕ ಮೀಡಿಯಾ ಹಬ್ಬ-2025” ಕಾರ್ಯಕ್ರಮ ಉದ್ಗಾಟಿಸಿ ಅವರು ಮಾತನಾಡಿದರು.
ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಈ ಮೂರು ಕ್ಷೇತ್ರ ಸರಿಯಾದ ದಿಕ್ಕಿನಲ್ಲಿ ಸಾಗಬೇಕಾದಲ್ಲಿ ಮಾಧ್ಯಮ ಅಂಗ ತುಂಬಾ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ಇಂತಹ ಮಾಧ್ಯಮ ಕ್ಷೇತ್ರಕ್ಕೆ ಕಾಲಿಡುತ್ತಿರುವ ಪತ್ರಿಕೋದ್ಯಮ ವಿದ್ಯಾರ್ಥಿಗಳು ಓದುವ ಅಭ್ಯಾಸ ಹೆಚ್ಚಿಸಿಕೊಳ್ಳಬೇಕು. ಪುಸ್ತಕದಿಂದ ಜ್ಞಾನಾರ್ಜನೆ ಪಡೆದಾಗ ಮಾತ್ರ ಪರಿಪೂರ್ಣರಾಗುತ್ತೀರಿ ಮತ್ತು ನಿಮ್ಮಲ್ಲಿ ಪ್ರಶ್ನೆ ಕೇಳುವ ಧೈರ್ಯ ಬರುತ್ತೆ ಎಂದರು.
ಕಲ್ಯಾಣ ಕರ್ನಾಟಕ ವಿಭಾಗದ ಸಮಗ್ರ ಅಭಿವೃದ್ಧಿಗೆ ಮಂಡಳಿಯು ಅಕ್ಷರ ಆವಿಷ್ಕಾರ, ಆರೋಗ್ಯ ಆವಿಷ್ಕಾರ, ಕಲ್ಯಾಣ ಪಥ, ಪ್ರಜಾ ಸೌಧ ನಿರ್ಮಾಣದಂತಹ ಅನೇಕ ಅಭಿವೃದ್ಧಿಪರ ಕೆಲಸಗಳನ್ನು ಮಾಡುತ್ತಿದ್ದು, ಮುಂದಿನ ದಿನದಲ್ಲಿ ಅದರ ಫಲಿತಾಂಶ ಕಾಣಬಹುದಾಗಿದೆ ಎಂದ ಅವರು, ಸಣ್ಣ ಪತ್ರಿಕೆಗಳಿಗೆ ಪ್ರೋತ್ಸಾಹದ ಜಾಹೀರಾತು ಮಂಡಳಿಯಿಂದ ನಿಡುವ ಕುರಿತು ಸಿಎಂ ಜೊತೆಗೆ ಚರ್ಚಿಸಲಾಗುವುದು ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಕಲಬುರಗಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಪೂಜ್ಯ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ ಅವರು ಮಾತನಾಡಿ, ಸ್ವಾತಂತ್ರ್ಯ ಪೂರ್ವ ಮತ್ತು ನಂತರದಲ್ಲಿ ಪ್ರದೇಶದ ಅಭಿವೃದ್ಧಿಗೆ ಮಾಧ್ಯಮದ ಕೊಡುಗೆ ಅನನ್ಯವಾಗಿದೆ. ಮಾಧ್ಯಮ ಸಮಾಜದ ಪ್ರತಿಬಿಂಬವಾಗಿದ್ದು, ಯುವ ಉದಯೋನ್ಮುಖ ಪತ್ರಕರ್ತರಿಗೆ ವೇದಿಕೆ ಒದಗಿಸುವ ಮೀಡಿಯಾ ಫೆಸ್ಟ್ ತಮ್ಮ ಸಂಸ್ಥಾನದ ಆವರಣದಲ್ಲಿ ಆಯೋಜಿಸಿರುವುದು ಸ್ವಾಗತಾರ್ಹ ಎಂದ ಅವರು, 1917ರಲ್ಲಿ ಇಲ್ಲಿ ಗ್ರಂಥಾಲಯ ಸ್ಥಾಪಿಸಿ ಸಾರ್ವಜನಿಕರಿಗೆ ಪತ್ರಿಕೆ ಓದುವ ಅವಕಾಶ ಕಲ್ಪಿಸಿದ ಕೀರ್ತಿ ಪೂಜ್ಯ ದೊಡ್ಡಪ್ಪ ಅಪ್ಪ ಅವರಿಗೆ ಸಲ್ಲುತ್ತದೆ. ತಮ್ಮ ಸಂಸ್ಥೆಯಡಿ ಗೋದುತಾಯಿ ಕಾಲೇಜಿನಲ್ಲಿ ಮಹಿಳೆಯರಿಗೆ ಪತ್ರಿಕೋದ್ಯಮ ವಿಷಯ ಮತ್ತು ಇತ್ತೀಚೆಗೆ ಪ್ರತ್ಯೇಕ ಪತ್ರಿಕೋದ್ಯಮ ವಿಭಾಗ ತೆರೆದು ಈ ಭಾಗದ ಮಕ್ಕಳಿಗೆ ಪತ್ರಿಕೋದ್ಯಮ ಕ್ಷೇತ್ರಕ್ಕೆ ಕಾಲಿಡಲು ಶರಣಬಸವ ವಿವಿ ಶ್ರಮಿಸುತ್ತಿದೆ ಎಂದರು.
ವಿದ್ಯಾರ್ಥಿಗಳಲ್ಲಿ ಹಿಂಜರಿಕೆ ಬೇಡ :
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ ಅವರು ಮಾತನಾಡಿ, ಅಕಾಡೆಮಿಯು ಎಸ್.ಸಿ.ಪಿ-ಟಿ.ಎಸ್.ಪಿ ಹಾಗೂ ಲಿಂಗಾನುಪಾತ ಅನುದಾನದಡಿ ಮಹಿಳಾ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಅಪ್ರೆಂಟಿಸ್ ತರಬೇತಿ ನೀಡಲಾಗುತ್ತಿದ್ದು, ಈ ಭಾಗದ ಅಭ್ಯರ್ಥಿಗಳು ಹೆಚ್ಚು ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿಲ್ಲ. ಪತ್ರಿಕೋದ್ಯಮ ವಿದ್ಯಾರ್ಥಿಗಳಲ್ಲಿ ಹಿಂಜರಿಕೆ ಬೇಡ, ಪ್ರಶ್ನೆ ಕೇಳಲು ಧೈರ್ಯ ತೋರಬೇಕು. ಪ್ರದೇಶದ ವಿದ್ಯಾರ್ಥಿಗಳು ಸಂಕುಚಿತ ಮನೋಭಾವನೆಯಿಂದ ಹೊರಬನ್ನಿ ಎಂದರು.
ವಿಶ್ವಕ್ಕೆ ಪ್ರಜಾಪ್ರಭುತ್ವ ಸಾರಿದ ಕಲಬುರಗಿ ನೆಲದಲ್ಲಿ ಮಾಧ್ಯಮ ಅಕಾಡೆಮಿಯು ಪ್ರಥಮ ಬಾರಿಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೀಡಿಯಾ ಫೆಸ್ಟ್ ಆಯೋಜಿಸಿದೆ. ಅಕಾಡೆಮಿಯನ್ನು ಡಿಜಿಟಲೀಕರಣ ಮಾಡುವ ಉದ್ದೇಶ ಹೊಂದಿದ್ದು, ಇತ್ತೀಚೆಗೆ ಅಕಾಡೆಮಿಯಿಂದ ನೀಡಲಾಗುವ ವಾರ್ಷಿಕ ಪ್ರಶಸ್ತಿ ಮೊತ್ತ ಸಹ ಹೆಚ್ಚಳ ಮಾಡಲಾಗಿದೆ. ಗ್ರಾಮೀಣ ಭಾಗದ ಪತ್ರಕರ್ತರಿಗೆ ವೃತ್ತಿ ಕೌಶಲ್ಯ ಹೆಚ್ಚಿಸಲು ತರಬೇತಿ ಆಯೋಜಿಸಲು ಸಣ್ಣ ಪತ್ರಿಕೆಗಳ ಬೆಳವಣಿಗೆ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ತಮ್ಮ ಆಶಯ ಭಾಷಣದಲ್ಲಿ ತಿಳಿಸಿದರು.
ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಮಾತನಾಡಿ, ಸಮಾಜದ ಕನ್ನಡಿಯೇ ಮಾಧ್ಯಮ. ವಿಶ್ವದಾದ್ಯಂತ ಪ್ರತಿದಿನ ಆಗು ಹೊಗುವ ಸುದ್ದಿಯನ್ನು, ಕಲೆ, ಸಂಸ್ಕೃತಿ, ಇತಿಹಾಸವನ್ನು, ನೈಜ ಘಟನಾವಳಿಗಳನ್ನು ಸಾರ್ವಜನಿಕರಿಗೆ ತಲುಪಿಸುವ ಮಹತ್ವದ ಜವಾಬ್ದಾರಿ ಪತ್ರಕರ್ತರ ಮೇಲೆ ಇದೆ. ಸಾಮಾಜಿಕ ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆಯುವ ಪತ್ರಕರ್ತನಾದವನಿಗೆ ಮಾನವ ಸ್ಪರ್ಶಿ ಇರಬೇಕಾದದ್ದು, ಅತೀ ಅವಶ್ಯಕ ಎಂದು ಅವರು ಅಭಿಪ್ರಾಯಪಟ್ಟರು.
ಮಾಧ್ಯಮ ಸಾಮಾಜಿಕ ಹೊಣೆಗಾರಿಕೆ ನಿಭಾಯಿಸಲಿ :
ಕೊಪ್ಪಳ ವಿಶ್ವವಿದ್ಯಾಲಯದ ಉಪ ಕುಲಪತಿ ಬಿ.ಕೆ. ರವಿ ಮಾತನಾಡಿ, ಇತ್ತೀಚೆಗೆ ಮಾಧ್ಯಮಗಳು ಮನೋರಂಜನೆ ಸುದ್ದಿಗೆ ಹೆಚ್ಚು ಮಹತ್ವ ನೀಡುತ್ತಿರುವುದರಿಂದ ಅಭಿವೃದ್ಧಿ ಪರ, ಸಮಾಜ ಮುಖಿಯ ಸುದ್ದಿಗಳು ದೂರವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಇಂದಿಗೂ ನಮ್ಮ ರಾಜ್ಯದಲ್ಲಿ ಅಪೌಷ್ಠಿಕತೆ, ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಹೆಚ್ಚಿದೆ. ಬಾಲ್ಯ ವಿವಾಹದಂತಹ ಸಾಮಾಜಿಕ ಪಿಡುಗುಗಳು ಕಾಡುತ್ತಿವೆ. ಇದನ್ನೆಲ್ಲ ನಿರ್ಮೂಲನೆ ಮಾಡಬೇಕಿರುವುದರಿಂದ ಮನೋರಂಜನೆ ಜೊತೆಗೆ ಸಮಾಜಮುಖಿ ಸುದ್ದಿಗಳಿಗೂ ಮಾಧ್ಯಮಗಳು ಹೆಚ್ಚು ಆದ್ಯತೆ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಮಾಧ್ಯಮ ಕಾವಲುಗಾರನಾಗಿ ಸಾಮಾಜಿಕ ಹೊಣೆಗಾರಿಕೆ ಪ್ರದರ್ಶಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಅನಿಲಕುಮಾರ ಬಿಡವೆ, ಕುಲಸಚಿವ ಡಾ. ಎಸ್.ಜಿ. ಡೊಳ್ಳೆಗೌಡರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಂಟಿ ನಿರ್ದೇಶಕರಾದ ಮಂಜುನಾಥ ಡೊಳ್ಳಿನ, ಸಿದ್ದೇಶ್ವರಪ್ಪ ಜಿ.ಬಿ., ಉಪನಿರ್ದೇಶಕರಾದ ರಾಮಲಿಂಗಪ್ಪ ಬಿ.ಕೆ., ಜಡಿಯಪ್ಪ ಗೆದ್ಲಗಟ್ಟಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿ ಸಿಂಗ್, ಕಲಬುರಗಿ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ, ವಿಶ್ವವಿದ್ಯಾಲಯದ ಪ್ರೊ.ವಿ.ಟಿ.ಮೇತ್ರೆ, ಅಲ್ಲಮಪ್ರಭು ದೇಶಮುಖ, ಸಂಜಯಗೌಡ ಹೊಸಮನಿ ಮತ್ತಿತರರು ಇದ್ದರು.
ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಟಿ.ವಿ.ಶಿವಾನಂದನ್ ಅವರು ಸರ್ವರನ್ನು ಸ್ವಾಗತಿಸಿದರು. ಕರ್ನಾಟಕ ಮಾಧ್ಯಮ ಅಕಾಡೆಮಿಯ ಕಾರ್ಯದರ್ಶಿ ಸಹನಾ ಮಾಜಿ ವಂದಿಸಿದರು. ಮಾಧ್ಯಮ ಅಕಡೆಮಿ ಸದಸ್ಯೆ ಮತ್ತು ಕಾರ್ಯಕ್ರಮದ ಸಂಯೋಜಿಕಿ ರಶ್ಮಿ ಎಸ್. ನಿರೂಪಿಸಿದರು.
ಎರಡು ದಿನಗಳ ಕಾಲ ಶರಣಬಸವ ವಿ.ವಿ.ಯಲ್ಲಿ ನಡೆಯುವ ಮೀಡಿಯಾ ಫೆಸ್ಟ್ ನಲ್ಲಿ ಕಲಬುರಗಿ ಮತ್ತು ಬೆಳಗಾವಿ ವಿಭಾಗದ ಪತ್ರಿಕೋದ್ಯಮ ಅಭ್ಯರ್ಥಿಗಳು ಭಾಗವಹಿಸಿದ್ದು, ವಿವಿಧ ಸ್ಪರ್ಧೇಗಲ್ಲಿ ಪಾಲ್ಗೊಳ್ಳಲಿದ್ದಾರೆ.







