ಕಲಬುರಗಿ | ಕೃತಕ ಬುದ್ಧಿಮತ್ತೆ ಜಗತ್ತನ್ನು ಆವರಿಸಲಿದೆ : ಆಕಾಶ ತೊನಸಳ್ಳಿ
ಗೋದುತಾಯಿ ಕಾಲೇಜಿನಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ

ಕಲಬುರಗಿ : ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ಜಗತ್ತನ್ನು ಅವರಿಸಲಿದೆ ಎಂದು ಡಿಜಿಸ್ನೇರ್ ಟೆಕ್ನಾಲೋಜಿಸ್ ಸಂಸ್ಥಾಪಕ ಆಕಾಶ ತೊನಸಳ್ಳಿ ಹೇಳಿದರು.
ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ವಿಜ್ಞಾನ ವಿಭಾಗದ ವತಿಯಿಂದ ವೈಜ್ಞಾನಿಕ ಸಂಶೋಧನೆ ಮತ್ತು ನಾವಿನ್ಯತೆಯಲ್ಲಿ ಎಐ ಮೂಲಕ ಪರಿವರ್ತನೆಯನ್ನು ಸಬಲೀಕರಣಗೊಳಿಸುವುದು ಎಂಬ ವಿಷಯದ ಮೇಲೆ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ನಿಖರತೆ, ವೇಗ, ಆಳವಾದ ಡೇಟಾವನ್ನು ಮೌಲ್ಯಮಾಪನ ಮಾಡುವುದು ಎಐನ ಪ್ರಾಮುಖ್ಯತೆಯಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯಾಗುತ್ತಿದ್ದು, ವಿಜ್ಞಾನ, ತಂತ್ರಜ್ಞಾನ, ಆರೋಗ್ಯ, ರಕ್ಷಣಾ, ವಾಣಿಜ್ಯ, ಸಂಶೋಧನೆ, ಕೈಗಾರಿಕೆ ಹಲವಾರು ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತದೆ. ಇದರಿಂದ ಕೆಲಸಗಳು ತೀವ್ರಗತಿಯಲ್ಲಿ ಜರುಗುತ್ತವೆ. ಸಂಶೋಧನೆಯಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ ಅತಿ ಹೆಚ್ಚು ಕಂಡು ಬರುತ್ತದೆ. ಪ್ರತಿದಿನವೂ ತಂತ್ರಜ್ಞಾನದ ಬೆಳವಣಿಗೆ ನಡೆಯುತ್ತಾ ಇರುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಪುಟ್ಟಮಣಿ ದೇವಿದಾಸ್ ಮಾತನಾಡಿ, ಈ ಆಧುನಿಕ ಯುಗದಲ್ಲಿ ತಂತ್ರಜ್ಞಾನದ ಅರಿವು ಮತ್ತು ತಿಳಿವಳಿಕೆ ಬಹಳ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ಎಲ್ಲರೂ ಕೃತಕ ಬುದ್ಧಿಮತ್ತೆ ಮೇಲೆ ಅವಲಂಬನೆಯಾಗುವುದು ಅನಿವಾರ್ಯವಿದೆ. ಇದರ ಬಗ್ಗೆ ವಿದ್ಯಾರ್ಥಿಗಳು ಆಳವಾಗಿ ಅಧ್ಯಯನ ಮಾಡಬೇಕು. ಮಾನವರೇ ಸೃಷ್ಟಿಸಿದ ಕೃತಕ ಬುದ್ಧಿಮತ್ತೆ ಮಾನವರ ಕೆಲಸಕ್ಕೆ ಕತ್ತರಿ ಹಾಕುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.
ವೇದಿಕೆ ಮೇಲೆ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಸೀಮಾ ಪಾಟೀಲ, ಐಕ್ಯೂಎಸಿ ಸಂಯೋಜಕ ಡಾ.ಸಿದ್ಧಲಿಂಗರೆಡ್ಡಿ, ಪ್ರಾಧ್ಯಾಪಕ ಆದರ್ಶ ವಡ್ಡನಕೇರಿ ಇದ್ದರು.
ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಶ್ವೇತಾ ಗೋಪನೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು, ಕು. ಪ್ರಿಯಾಂಕ ಹೂಗಾರ, ದೇವಿಕಾ ಹೂಗಾರ ನಿರೂಪಿಸಿದರೆ, ನಸ್ರೀನ್ ವಂದಿಸಿದರು. ವಿದ್ಯಾರ್ಥಿನಿಯರು ವಿಜ್ಞಾನ ಹಲವಾರು ಪೋಸ್ಟರ್ ಪ್ರದರ್ಶನ ಮಾಡಿದರು.