ಕಲಬುರಗಿ | ವರ್ಣಕಲಾಶ್ರಿ ಪ್ರಶಸ್ತಿಗೆ ಕಲಾವಿದ ರೆಹಮಾನ್ ಪಟೇಲ್ ಆಯ್ಕೆ

ಕಲಬುರಗಿ: ಬೆಳಗಾವಿ ಆಧಾರಿತ ವರ್ಣಕಲಾ ಸಾಂಸ್ಕೃತಿಕ ಸಂಘವು 2024–25ರ ವರ್ಣಕಲಾಶ್ರಿ ಪ್ರಶಸ್ತಿಗೆ ಇಲ್ಲಿನ ಖ್ಯಾತ ಚಿತ್ರ ಕಲಾವಿದ ರೆಹಮಾನ್ ಪಟೇಲ್ ಅವರನ್ನು ಆಯ್ಕೆ ಮಾಡಿದೆ.
ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಸುರಪುರ ಪರಂಪರೆಯ ಕಲೆಯನ್ನು ಪುನರುಜ್ಜೀವನಗೊಳಿಸಿ, ಅದನ್ನು ಪೋಷಿಸಿ ಬೆಳೆಸಿದ ರೆಹಮಾನ್ ಪಟೇಲ್ ಅವರ ಸಮರ್ಪಣೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ ಎಂದು ವರ್ಣಕಲಾ ಸಾಂಸ್ಕೃತಿಕ ಸಂಘದ ಪ್ರಕಟನೆ ತಿಳಿಸಿದೆ.
ನ.23ರಂದು ಬೆಳಗಾವಿಯ ಕಲಾಮಹರ್ಷಿ ಕೆ.ಬಿ.ಕುಲಕರ್ಣಿ ಕಲಾ ಗ್ಯಾಲರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವೆ ಲಕ್ಷ್ಮಿ ಆರ್. ಹೆಬ್ಬಾಳ್ಕರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಲಾ ಶಿಕ್ಷಣ ಇಲಾಖೆಯ ಬಿಇಒ ರವಿ ಭಜನತ್ರಿ ಪ್ರಶಸ್ತಿ ಪ್ರದಾನ ಮಾಡಲಿದ್ದು, ಖ್ಯಾತ ಕಲಾವಿದ ಪಿ.ಎಸ್. ಕಡೆಯಮಣಿ ಮುಖ್ಯ ಅತಿಥಿಯಾಗಿರುವರು.
ವರ್ಣಕಲಾ ಸಂಸ್ಕೃತಿಕ ಸಂಘದ ಅಧ್ಯಕ್ಷ ನಾಗೇಶ್ ಸಿ. ಚಿಮರೋಳ ಅಧ್ಯಕ್ಷತೆ ವಹಿಸಲಿದ್ದು, ಖ್ಯಾತ ಕಲಾವಿದರಾದ ದಿಲೀಪ್ಕುಮಾರ್ ಕಾಳೆ ಮತ್ತು ಆರ್.ಎ. ದೇವರುಷಿ ಗೌರವ ಅತಿಥಿಗಳಾಗಿರುವರು ಎಂದು ಸಂಘದ ಕಾರ್ಯದರ್ಶಿ ಸಂತೋಷ ಎಸ್. ಮಲ್ಲೋಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







