ಕಲಬುರಗಿ ಜೈಲಿಗೆ ನಿಷೇಧಿತ ವಸ್ತು ಪೂರೈಕೆ ಯತ್ನ : ಪ್ರಕರಣ ದಾಖಲು

ಕಲಬುರಗಿ: ಕೈದಿಗಳ ಐಷಾರಾಮಿ ಜೀವನ, ಪಿಎಸ್‌ಐ ನೇಮಕಾತಿ ಅಕ್ರಮದ ಆರೋಪಿ ಆರ್.ಡಿ. ಪಾಟೀಲ್ ಗಲಾಟೆ ಹಾಗೂ ಜೈಲರ್ ಲಂಚದ ಆರೋಪಗಳಿಂದ ಸುದ್ದಿಯಾಗಿದ್ದ ಕಲಬುರಗಿ ಕೇಂದ್ರ ಕಾರಾಗೃಹ, ಈಗ ಮತ್ತೊಂದು ವಿವಾದಕ್ಕೆ ಸಾಕ್ಷಿಯಾಗಿದ್ದು, ಜೈಲಿನೊಳಗೆ ನಿಷೇಧಿತ ವಸ್ತುಗಳನ್ನು ಎಸೆಯಲು ಯತ್ನಿಸಿದ ಮೂವರು ಆರೋಪಿಗಳನ್ನು ಫರಹತಾಬಾದ್ ಪೊಲೀಸರು ಬಂಧಿಸಿದ್ದಾರೆ.
ನಗರದ ಬಸವನಗರದ ನಿವಾಸಿಗಳಾದ ಪಿಂಟು, ವಿಜಯಕುಮಾರ್ ಹಾಗೂ ವಡ್ಡರಗಲ್ಲಿಯ ಅನಿಲ್ ಸಿದ್ದಪ್ಪ ಜಾಧವ್ ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ವಿವರ:
ಸೋಮವಾರ ಮಧ್ಯಾಹ್ನ ಶರಣಬಸವೇಶ್ವರ ಕೇಂದ್ರ ಕಾರಾಗೃಹದ ಸಿಬ್ಬಂದಿಗಳಾದ ಭೀಮಾಶಂಕರ, ಜಗನ್ನಾಥ, ಶಂಭುಲಿಂಗ, ಪ್ರಭುಲಿಂಗ, ಮಹಾಂತೇಶ, ನಿಂಗಣ್ಣ ಹಾಗೂ ಸಂಜಯಕುಮಾರ್ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದರು. ಈ ವೇಳೆ ಜೈಲಿನ ಗೋಡೆಯ ಸಮೀಪ ಮೂವರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಡುತ್ತಾ, ಉಂಡೆಯ ರೂಪದಲ್ಲಿದ್ದ ನಿಷೇಧಿತ ವಸ್ತುಗಳನ್ನು ಜೈಲಿನೊಳಗೆ ಎಸೆಯಲು ಯತ್ನಿಸುತ್ತಿದ್ದರು. ತಕ್ಷಣವೇ ಜೈಲು ಸಿಬ್ಬಂದಿ ಅವರನ್ನು ಸುತ್ತುವರಿದು ವಶಕ್ಕೆ ಪಡೆದಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಫರಹತಾಬಾದ್ ಪಿಐ ಹುಸೇನ್ ಬಾಷಾ ಮತ್ತು ತಂಡ ಸ್ಥಳಕ್ಕೆ ಧಾವಿಸಿ ಆರೋಪಿಗಳನ್ನು ಬಂಧಿಸಿದರು. ಅವರಿಂದ ಮೊಬೈಲ್ ಫೋನ್‌ಗಳು, 3 ಪ್ಯಾಕೆಟ್ ಸಿಗರೇಟ್, ಗಣೇಶ ಬೀಡಿಗಳು ಹಾಗೂ ಮ್ಯಾಚ್ ಬಾಕ್ಸ್‌ಗಳನ್ನು ಜಪ್ತಿ ಮಾಡಲಾಗಿದೆ.
ಈ ಕುರಿತು ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







