ಕಲಬುರಗಿ| "ವಲಸೆ ಹಕ್ಕಿಯ ಹಾಡು" ಆತ್ಮಕಥೆ ಬಿಡುಗಡೆ

ಕಲಬುರಗಿ: ನಗರದ ಖಾಸಗಿ ಹೋಟೆಲ್ ನಲ್ಲಿ ವಿಶ್ವ ಪ್ರಕಾಶನ ಸಂಸ್ಥೆ ಆಯೋಜಿಸಿದ್ದ ಪ್ರೊ. ಕೃಷ್ಣ ನಾಯಕ ಅವರ "ವಲಸೆ ಹಕ್ಕಿಯ ಹಾಡು" ಆತ್ಮಕಥೆಯ ಕೃತಿಯನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಡಿ. ಬಿ. ನಾಯಕ ಅವರು, ಒಂದು ಕಾಲಘಟ್ಟದ ಸಾಮಾಜಿಕ ಬದುಕು, ಜನಜೀವನ, ಆರ್ಥಿಕ ಸ್ಥಿತಿ- ಗತಿ, ಗ್ರಾಮ ಪರಿಸರ, ಕೌಟುಂಬಿಕ ಸಂಬಂಧಗಳು, ಸಾಹಿತ್ಯ , ಶಿಕ್ಷಣ, ಮಾನವೀಯ ಮೌಲ್ಯಗಳು ಇನ್ನೂ ಅನೇಕ ವಸ್ತು ವಿಷಯಗಳು ವಿಭಿನ್ನ ಮತ್ತು ವಿಶಿಷ್ಟವಾಗಿ ಅನಾವರಣಗೊಂಡಿರುವ ಕೃಷ್ಣ ನಾಯಕ ಅವರ ಆತ್ಮಕಥೆ ಇಡೀ ಬಂಜಾರ ಜನಾಂಗದ ಸಂಸ್ಕೃತಿ ಕಥನವಾಗಿದೆ ಎಂದು ಅಭಿಪ್ರಾಯಪಟ್ಟರು.
ಈವರೆಗೆ ಐದು ಕಥಾ ಸಂಕಲನ, ಒಂದು ಸಮಗ್ರ ಕಥಾ ಸಂಕಲನ ನೀಡಿದ ಪ್ರೊ. ಕೃಷ್ಣ ನಾಯಕ ಕನ್ನಡ ಕಥಾ ಸಾಹಿತ್ಯ ಕ್ಷೇತ್ರ ಕಡೆಗಣಿಸಲು ಸಾಧ್ಯವಿಲ್ಲದ ಸಮರ್ಥ ಕಥೆಗಾರರಲ್ಲಿ ಒಬ್ಬರು. ವಲಸೆ ಹಕ್ಕಿಯ ಹಾಡು ಆತ್ಮಕಥೆ 2024ನೇ ಸಾಲಿನ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ (ಬೆಂಗಳೂರು) ಪ್ರಶಸ್ತಿ ಪುರಸ್ಕೃತ ಕೃತಿ ಆಗಿದ್ದು, ಅದು ಅತೀ ಕಡಿಮೆ ಅವಧಿಯಲ್ಲಿ ಮರು ಮುದ್ರಣ ಕಂಡು ಹೊರಬಂದಿರುವುದು ಕೃತಿಯ ವಿಶೇಷತೆಗೆ ಕನ್ನಡಿ ಹಿಡಿಯುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಸೂರ್ಯಕಾಂತ್ ಸೊನ್ನದ, "ಆತ್ಮಕಥನ ಬರೆಯುವುದು ತುಂಬ ಕಷ್ಟದ ಕೆಲಸ. ಅದರಲ್ಲಿ ವ್ಯಕ್ತಿ ತನ್ನ ಬದುಕಿನ ಜೊತೆಗೆ ಸುತ್ತಲಿನ ಪರಿಸರದ ಕುರಿತು ಸತ್ಯಾಸತ್ಯತೆಗಳನ್ನು ಬಿಚ್ಚಿಡಬೇಕಾಗುತ್ತದೆ. ಹಾಗೆಂದೇ ಆತ್ಮಕಥನವು ಸಿಹಿ ಕಹಿ ನೆನಪುಗಳ ಬುತ್ತಿಯಾಗಿರುತ್ತದೆ. ಪ್ರೊ. ಕೃಷ್ಣ ನಾಯಕ ತಮ್ಮ ಆತ್ಮಕಥನದಲ್ಲಿ ವೈಯಕ್ತಿಕ ಬದುಕಿನ ಅನುಭವಗಳನ್ನು ತುಂಬ ಪ್ರಾಮಾಣಿಕವಾಗಿ ನಿರೂಪಿಸಿದ್ದಾರೆ" ಎಂದರು.
ಕೃತಿಯ ಲೇಖಕರಾದ ಪ್ರೊ. ಕೃಷ್ಣ ನಾಯಕ ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕಾಶಕರಾದ ಉಷಾ ನಾಯಕ, ಗೀತಾರಾಣಿ ನಾಯಕ, ಪಲ್ಲವಿ ಚವ್ಹಾಣ, ಡಾ. ಆನಂದ್ ನಾಯಕ್, ಸಂಜೀವ್ ಕುಮಾರ್ ಚವ್ಹಾಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







