ಕಲಬುರಗಿ| ಕೈದಿಗಳಿಗೆ 'ಪೆರೋಲ್ ಬಿಡುಗಡೆ' ಕುರಿತು ಅರಿವಿನ ಕಾರ್ಯಕ್ರಮ

ಕಲಬುರಗಿ: ಕೇಂದ್ರ ಕಾರಾಗೃಹ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಕೈದಿಗಳಿಗೆ ಪೆರೋಲ್ ಮೇಲೆ ಬಿಡುಗಡೆ ಕುರಿತು ಅರಿವಿನ ಕಾರ್ಯಕ್ರಮವನ್ನು ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಹಮ್ಮಿಕೊಳ್ಳಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನ್ಯಾಯಾಧೀಶರಾದ ಶ್ರೀನಿವಾಸ ನವಲೆ, ಪೆರೋಲ್ ಅಂದರೆ ತಾತ್ಕಾಲಿಕ ಬಿಡುಗಡೆ, ಈ ಅವಧಿಯಲ್ಲಿ ತಮಗೆ ನಿಗಧಿಗೊಳಿಸಿದ ದಿನಾಂಕದೊಳಗೆ ಪೆರೋಲ್ ಮೇಲೆ ಬಿಡುಗಡೆ ಹೊಂದಿದ್ದರೆ ತಾವು ತಿಂಗಳ ಕೊನೆಯ ದಿನಾಂಕಕ್ಕೆ ಕಾರಾಗೃಹಕ್ಕೆ ಬಂದು ವರದಿಯನ್ನು ಮಾಡಬೇಕು. ಒಂದು ವೇಳೆ ಒಂದು ದಿನ ತಡವಾದರೂ ಅದು ಕಾನೂನಿನ ಅಡಿಯಲ್ಲಿ ಅಪರಾಧವಾಗುತ್ತದೆ. ಆಗ ತಮಗೆ 2 ವರ್ಷಗಳ ಹೆಚ್ಚುವರಿ ಶಿಕ್ಷೆಯನ್ನು ನೀಡಲಾಗುತ್ತದೆ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮುಖ್ಯ ಅಧೀಕ್ಷಕರಾದ ಡಾ.ಅನೀತಾ ಆರ್, ಪೆರೋಲ್ ಮೇಲೆ ಎರಡು ರೀತಿಯಲ್ಲಿ ಬಿಡುಗಡೆಗೆ ಅವಕಾಶವಿದೆ. ಒಂದು ಸಾಮಾನ್ಯ ಬಿಡುಗಡೆ, ಇನ್ನೊಂದು ತುರ್ತು ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ಪೆರೋಲ್ ಅವಧಿಯನ್ನು 1 ತಿಂಗಳಿಂದ 3 ತಿಂಗಳವರೆಗೆ ವಿಸ್ತರಿಸಲು ಅವಕಾಶವಿದೆ ಎಂದು ಹೇಳಿದರು.
ಸಂಸ್ಥೆಯ ಅಧೀಕ್ಷಕರಾದ ಎಂ.ಹೆಚ್.ಆಶೇಖಾನ್, ಸಹಾಯಕ ಅಧೀಕ್ಷಕರಾದ ಚನ್ನಪ್ಪ, ಜೈಲರ್‌ಗಳಾದ ಸುನಂದಾ ವಿ., ಪುಂಡಲೀಕ ಟಿ.ಕೆ, ಶ್ಯಾಮ ಬಿದ್ರಿ ಹಾಗೂ ಎಲ್ಲಾ ಅಧಿಕಾರಿ/ಸಿಬ್ಬಂದಿಗಳು ಭಾಗವಹಿಸಿದ್ದರು. ಶಿಕ್ಷಕರಾದ ನಾಗರಾಜ ಮೂಲಗೆ ನಿರೂಪಿಸಿದರು.







