ಕಲಬುರಗಿ | ಮೀನುಗಾರರಿಗೆ ಮೀನುಗಾರಿಕೆ ಕುರಿತು ಜಾಗೃತಿ ಕಾರ್ಯಕ್ರಮ

ಕಲಬುರಗಿ: ಕೇಂದ್ರಿಯ ಒಳನಾಡು ಮೀನುಗಾರಿಕೆ ಸಂಶೋಧನಾ ಸಂಸ್ಥೆ (ICAR–CIFRI) ಹೆಸರಘಟ್ಟ, ಬೆಂಗಳೂರು ಹಾಗೂ ಕಲಬುರಗಿ ಮೀನುಗಾರಿಕೆ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಭೀಮಾ ನದಿಭಾಗದ ಮೀನುಗಾರರಿಗಾಗಿ ಜಾಗೃತಿ ಕಾರ್ಯಕ್ರಮ ಬುಧವಾರ ಕಲಬುರಗಿ ಮೀನುಗಾರಿಕೆ ಉಪನಿರ್ದೇಶಕರ ಕಚೇರಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಹಿರಿಯ ವಿಜ್ಞಾನಿ ಡಾ.ವಿಜಯ ಕುಮಾರ ಮಾತನಾಡಿ, ಭೀಮಾ ನದಿಯಲ್ಲಿರುವ ಮೀನಿನ ತಳಿಗಳ ಬಗ್ಗೆ ಮಾಹಿತಿ ನೀಡಿದರು. ಕರಾವಳಿ ಮೀನುಗಾರರಂತೆ ನದಿಭಾಗದ ಮೀನುಗಾರರೂ ಹೆಚ್ಚಿನ ಪ್ರಮಾಣದಲ್ಲಿ ಮೀನುಕೃಷಿ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು.
ಹಿರಿಯ ವಿಜ್ಞಾನಿ ಡಾ. ರಮ್ಯಾ ಅವರು, ಕೆರೆ-ಜಲಾಶಯಗಳ ಜೊತೆಗೆ ನದಿಭಾಗದಲ್ಲೂ ಮೀನುಗಾರಿಕೆ ಅಭಿವೃದ್ಧಿ ಮತ್ತು ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲಬುರಗಿ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಎಸ್.ಆರ್. ನಾಗರಾಜ ಅವರು, ಮೀನುಗಾರರು ನದಿಯಲ್ಲಿ ಮೀನು ಮರಿ ಪಾಲನೆ ಮೂಲಕ ಹಿಡುವಳಿಯನ್ನು ಹೆಚ್ಚಿಸಿಕೊಳ್ಳಬೇಕು. ಗುಂಪು ವಿಮಾ ಯೋಜನೆ, ಎನ್‌ಎಫ್‌ಡಿಪಿ ನೋಂದಣಿ, ಮತ್ಸ್ಯಾಶ್ರಯ, ಕೆಸಿಸಿ ಯೋಜನೆಗಳಂತಹ ಇಲಾಖೆಯ ಕಲ್ಯಾಣ ಯೋಜನೆಗಳಿಂದ ಎಲ್ಲಾ ಮೀನುಗಾರರು ಪ್ರಯೋಜನ ಪಡೆಯಬೇಕು ಎಂದರು.
ಉಚಿತ ದೋಣಿ ವಿತರಣೆ :
ಮೀನುಗಾರಿಕೆ ಸಹಾಯಕ ನಿರ್ದೇಶಕ ಶಂಕರ ಮಾತನಾಡಿ, ಪರಿಶಿಷ್ಟ ಜಾತಿಯ ಮೀನುಗಾರರಿಗೆ ಉತ್ತಮ ಗುಣಮಟ್ಟದ ಫೈಬರ್ ದೋಣಿಗಳನ್ನು ಸಂಸ್ಥೆಯು ಉಚಿತವಾಗಿ ಸರಬರಾಜು ಮಾಡಿರುವುದರಿಂದ ಅವರಿಗೆ ಬಹುಮುಖ್ಯ ಅನುಕೂಲವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಮೀನುಗಾರಿಕೆ ಅಭಿವೃದ್ದಿ ನಿಗಮದ ಅಧ್ಯಕ್ಷೆ ಮಾಲಾ ಬಿ. ನಾರಾಯಣ ಅವರು ಭೀಮಾ ನದಿಪಾತ್ರದ 5 ಪರಿಶಿಷ್ಟ ಜಾತಿ ಮೀನುಗಾರರಿಗೆ ಉಚಿತ ಫೈಬರ್ ದೋಣಿಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ICAR–CIFRI ಸಂಸ್ಥೆಯ ವಿಜ್ಞಾನಿಗಳು, ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ಭೀಮಾ ನದಿಭಾಗದ ಅನೇಕ ಮೀನುಗಾರರು ಉಪಸ್ಥಿತರಿದ್ದರು.







