ಕಲಬುರಗಿ | ಶಾಲಾ-ಕಾಲೇಜು, ಆಸ್ಪತ್ರೆ ಆವರಣದಲ್ಲಿನ ನಾಯಿಗಳನ್ನು ಶಾಶ್ವತವಾಗಿ ಸ್ಥಳಾಂತರಿಸಿ: ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಸೂಚನೆ

ಕಲಬುರಗಿ: ಸಾರ್ವಜನಿಕರು ಮತ್ತು ವಿಶೇಷವಾಗಿ ಮಕ್ಕಳಿಗೆ ತೊಂದರೆ ಉಂಟು ಮಾಡುತ್ತಿರುವ ಜಿಲ್ಲೆಯಾದ್ಯಂತ ನಗರ ಹಾಗೂ ಪ್ರದೇಶದ ಶಾಲಾ ಕಾಲೇಜು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಆವರಣ, ಕ್ರೀಡಾಂಗಣ, ವಸತಿ ನಿಲಯ, ಆಸ್ಪತ್ರೆ ಆವರಣದಲ್ಲಿನ ನಾಯಿಗಳನ್ನು ಖಾಯಂ ಆಗಿ ಸ್ಥಳಾಂತರಿಸಿ ಸಂತಾನ ಹರಣ ಚಿಕಿತ್ಸೆಯ ಲಸಿಕಾ ಕಾರ್ಯ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ತಿಳಿಸಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಾಯಿಗಳ ಸ್ಥಳಾಂತರ ಮತ್ತು ಮತ್ತು ಜಾನುವಾರುಗಳನ್ನು ಗೋಶಾಲೆಗೆ ಸೇರಿಸುವ ಸಂಬಂಧ Suo Moto WP (Civil) No 5 of 2025 ದಿನಾಂಕ 07-11-2025ರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶದಂತೆ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಫೌಝಿಯಾ ತರನ್ನುಮ್, ಇನ್ನು ಬೀದಿ ಬದಿ ನಾಯಿಗಳನ್ನು ಎ.ಬಿ.ಸಿ.ಲಸಿಕೆ ನೀಡಿ ಅದೇ ಸ್ಥಳದಲ್ಲಿ ಬಿಡಬೇಕು ಎಂದರು.
ಇದಲ್ಲದೆ ರಾಜ್ಯ ಮತ್ತು ರಾಷ್ಟ್ರ ಹೆದ್ದಾರಿ ಸೇರಿದಂತೆ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ತೊಂದರೆಯಾಗಿರುವ ಬಿಡಾಡಿ ದನಗಳನ್ನು ಶಾಶ್ವತವಾಗಿ ಜಾನುವಾರುಗಳ ತಂಗುದಾಣ ಅಥವಾ ಗೋಶಾಲೆಗಳಿಗೆ ಸೇರಿಸಬೇಕು. ಈ ನಿಟ್ಟಿನಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಜಿಲ್ಲೆಯ ಎಲ್ಲಾ ನಗರ, ಗ್ರಾಮೀಣ ಪ್ರದೇಶದಲ್ಲಿ ಇದನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು ಎಂದರು.
ಸರ್ವೋಚ್ಚ ನ್ಯಾಯಾಲಯದ ನಿರ್ದೇಶನವನ್ನು ಪಾಲಿಸಲು ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮೀಣ ಭಾಗದ ಎಲ್ಲಾ ಸಂಸ್ಥೆಯ ಮುಖ್ಯಸ್ಥರುಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಅದೇ ರೀತಿ ಶಿಕ್ಷಣ, ಆರೋಗ್ಯ, ಸಾರಿಗೆ, ರೈಲ್ವೆ, ಮಹಾನಗರ ಪಾಲಿಕೆ, ನಗರಾಭಿವೃದ್ದಿ, ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪೋಲಿಸ್ ಇಲಾಖೆ, ಲೋಕೋಪಯೋಗಿ ಇಲಾಖೆ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ವಿಶ್ವವಿದ್ಯಾಲಯ, ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳು ಸರ್ವೋಚ್ಚ ನ್ಯಾಯಾಲಯದ ಆದೇಶಗಳನ್ನು ಪಾಲಿಸಿ ವರದಿ ಸಲ್ಲಿಸುವಂತೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ ಪಾಟೀಲ್, ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆಯ ಉಪನಿರ್ದೇಶಕ ಡಾ.ಸಂಜಯ್ ರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.







