Kalaburagi | ಬಾಬು ಜಗಜೀವನರಾಮ್ ಭಾವಚಿತ್ರ ಫಲಕ ಧ್ವಂಸ ಪ್ರಕರಣ : ಐವರ ಬಂಧನ

ಬಂಧಿತ ಆರೋಪಿಗಳು
ಕಲಬುರಗಿ: ಚಿಂಚೋಳಿ ತಾಲೂಕಿನ ಕೊಟಗಾ ಗ್ರಾಮದಲ್ಲಿ ಶ್ರೀ ಬಾಬು ಜಗಜೀವನರಾಮ್ ಅವರ ಭಾವಚಿತ್ರವಿದ್ದ ಕಬ್ಬಿಣದ ಫಲಕವನ್ನು ಧ್ವಂಸಗೊಳಿಸಿ ಅಪಮಾನ ಮಾಡಿದ ಪ್ರಕರಣವನ್ನು ರಟಕಲ್ ಪೊಲೀಸರು ಯಶಸ್ವಿಯಾಗಿ ಬೇಧಿಸಿದ್ದು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಅದೇ ಗ್ರಾಮದ ಸಂಜು ಅಲಿಯಾಸ್ ಸಂಜೀವಕುಮಾರ (40), ಶಿರೋಮಣಿ (50), ನಾಗರಾಜ (24), ರಘು (19) ಹಾಗೂ ದೀಪಕ (18) ಎಂದು ಗುರುತಿಸಲಾಗಿದೆ.
ಜುಲೈ 9ರ ಬೆಳಿಗ್ಗೆ 9 ಗಂಟೆಯಿಂದ ಜುಲೈ 10ರ ಬೆಳಿಗ್ಗೆ 8.30 ಗಂಟೆಯ ನಡುವಿನ ಅವಧಿಯಲ್ಲಿ ಕೊಟಗಾ ಗ್ರಾಮದ ಸರ್ಕಾರಿ ಜಮೀನು ಸರ್ವೆ ನಂ. 5ರಲ್ಲಿ ಅಳವಡಿಸಲಾಗಿದ್ದ ಶ್ರೀ ಬಾಬು ಜಗಜೀವನರಾಮ್ ಅವರ ಭಾವಚಿತ್ರವಿರುವ ಕಬ್ಬಿಣದ ಫಲಕವನ್ನು ಕಿಡಿಗೇಡಿಗಳು ಕಿತ್ತುಹಾಕಿ ಹಾನಿಗೊಳಿಸಿದ್ದರು. ಅಲ್ಲದೆ, ಭಾವಚಿತ್ರಕ್ಕೆ ಸಗಣಿ ಬಳಿದು ಚಪ್ಪಲಿ ಹಾರ ಹಾಕಿ ಅವಮಾನ ಮಾಡಲಾಗಿತ್ತು.
ಈ ಕುರಿತು ದಶರಥ್ ಎಂಬುವರು ನೀಡಿದ ದೂರಿನ ಮೇರೆಗೆ ರಟಕಲ್ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 56/2026ರಡಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 298ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಪ್ರಕರಣದ ತನಿಖೆಯನ್ನು ಚಿಂಚೋಳಿ ಉಪವಿಭಾಗದ ಡಿವೈಎಸ್ಪಿ ಅವರ ಮಾರ್ಗದರ್ಶನದಲ್ಲಿ ಹಾಗೂ ಸುಲೇಪೇಟ ವೃತ್ತದ ಸಿಪಿಐ ಕೃಷ್ಣಕುಮಾರ್ ಅವರ ಮೇಲ್ವಿಚಾರಣೆಯಲ್ಲಿ, ರಟಕಲ್ ಪೊಲೀಸ್ ಠಾಣೆಯ ಪಿಎಸ್ಐ ಶೀಲಾದೇವಿ ನೇತೃತ್ವದ ವಿಶೇಷ ತನಿಖಾ ತಂಡ ನಡೆಸಿತು.
ಕೃತ್ಯ ನಡೆದ ಸ್ಥಳವು ಜನವಸತಿ ಇಲ್ಲದ ಪ್ರದೇಶವಾಗಿದ್ದರಿಂದ ತನಿಖೆ ಸವಾಲಿನದ್ದಾಗಿತ್ತು. ಆದಾಗ್ಯೂ ತಾಂತ್ರಿಕ ಮತ್ತು ವೈಜ್ಞಾನಿಕ ಸಾಕ್ಷ್ಯಗಳ ಸಂಗ್ರಹ, ಸ್ಥಳೀಯ ಮಾಹಿತಿ ಕಲೆಹಾಕುವುದು ಹಾಗೂ ಕೂಲಂಕಷ ವಿಚಾರಣೆಯ ಮೂಲಕ ಪ್ರಕರಣವನ್ನು ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾದರು.
ತನಿಖೆಯಲ್ಲಿ ಬೆಳಕಿಗೆ ಬಂದಿರುವಂತೆ, ಕೊಟಗಾ ಗ್ರಾಮದ ಸರ್ವೆ ನಂ. 5ರಲ್ಲಿ ಒಟ್ಟು 84 ಎಕರೆ 14 ಗುಂಟೆ ಸರ್ಕಾರಿ ಜಮೀನಿದ್ದು, ಅದೇ ಸರ್ವೆ ಸಂಖ್ಯೆಯಲ್ಲಿ ಖಾಸಗಿ ವ್ಯಕ್ತಿಯೊಬ್ಬರಿಗೆ 1 ಎಕರೆ 23 ಗುಂಟೆ ಜಮೀನು ಮಂಜೂರಾಗಿತ್ತು. ಜಮೀನಿನ ಕಬ್ಜಾ ಪ್ರಕ್ರಿಯೆ ನಡೆಯುತ್ತಿರುವ ವಿಚಾರ ತಿಳಿದ ಆರೋಪಿಗಳು, ಹಲವು ವರ್ಷಗಳಿಂದ ಯಾವುದೇ ಪೂರ್ವಾನುಮತಿ ಇಲ್ಲದೆ ಅಳವಡಿಸಲಾಗಿದ್ದ ಬಾಬು ಜಗಜೀವನರಾಮ್ ಅವರ ಭಾವಚಿತ್ರದ ಫಲಕವನ್ನು ಧ್ವಂಸಗೊಳಿಸಿ, ಅದರ ಮೂಲಕ ಗ್ರಾಮದಲ್ಲಿ ಉದ್ವಿಗ್ನತೆ ಸೃಷ್ಟಿಸುವ ಹಾಗೂ ಜಮೀನು ವಶಕ್ಕೆ ಪಡೆಯಲು ಮುಂದಾದವರ ಮೇಲೆಯೇ ಆರೋಪ ಬರುವಂತೆ ಮಾಡುವ ದುರುದ್ದೇಶದಿಂದ ಈ ಕೃತ್ಯ ಎಸಗಿರುವುದು ಬಹಿರಂಗವಾಗಿದೆ.
ಸೂಕ್ಷ್ಮ ಹಾಗೂ ಕ್ಲಿಷ್ಟಕರ ಪ್ರಕರಣವನ್ನು ಅಲ್ಪಾವಧಿಯಲ್ಲೇ ಯಶಸ್ವಿಯಾಗಿ ಬೇಧಿಸಿದ ರಟಕಲ್ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಕಲಬುರಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಡ್ಡೂರು ಶ್ರೀನಿವಾಸಲು ಶ್ಲಾಘಿಸಿದ್ದಾರೆ.






