ಕಲಬುರಗಿ | ತೊಗರಿ ಬೆಂಬಲ ಬೆಲೆ ಹೆಚ್ಚಳ, ಬಗರ್ ಹುಕುಂ ಸಾಗುವಳಿದಾರರ ಸಕ್ರಮಕ್ಕೆ ಆಗ್ರಹ

ಕಲಬುರಗಿ : ತೊಗರಿ ಬೆಂಬಲ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ನಿವಾಸದ ಮುಂದೆ ಫೆ.20ರಂದು ಹಾಗೂ ಬಗರ್ ಹುಕುಂ ಸಾಗುವಳಿದಾರರರಿಗೆ ಹಕ್ಕು ಪತ್ರ ಕೊಡಲು ಒತ್ತಾಯಿಸಿ ಫೆ.24ರಂದು ರಾಜ್ಯದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಬೀದರ್ ನಿವಾಸದ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಕ್ವಿಂಟಲ್ ತೊಗರಿಗೆ 12,500 ರೂ. ಗಳ ಬೆಂಬಲ ಬೆಲೆಯನ್ನು ಕೊಡುವಂತೆ, ಅರಣ್ಯ ಭೂಮಿ ಸಾಗುವಳಿದಾರರಿಗೆ ಒಕ್ಕಲೆಬ್ಬಿಸುತ್ತಿರುವುದನ್ನು ತಡೆಗಟ್ಟುವಂತೆ ಹಾಗೂ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ಕೊಡುವಂತೆ ಒತ್ತಾಯಿಸಿದರು.
ಕೂಡಲೇ ನೆಟೆ ರೋಗದಿಂದ ಒಣಗುತ್ತಿರುವ ತೊಗರಿ ಬೆಳೆ ಸಮೀಕ್ಷೆ ಮಾಡಬೇಕು. ನೆಟೆ ರೋಗದಿಂದ ಒಣಗಿದ ತೊಗರಿಗೆ ಎಕರೆಗೆ 25,000 ರೂ.ಗಳ ಪರಿಹಾರ ಕೊಡಬೇಕು. ಒಣಗಿ ಹೋದ ತೊಗರಿಗೆ ಬೆಳೆ ವಿಮೆ ಮಂಜೂರು ಮಾಡಬೇಕು ಎಂದು ಆಗ್ರಹಿಸಿದ ಅವರು, ಜಿಲ್ಲೆಯಲ್ಲಿ ಬಹಳಷ್ಟು ತೊಗರಿ ಬೆಳೆ ಹಾನಿಯಾದ ಬಗ್ಗೆ ವರದಿ ತರಿಸಿಕೊಂಡು ರಾಜ್ಯ ಸರ್ಕಾರ ಮಾರ್ಚ್ ತಿಂಗಳಲ್ಲಿ ಬಜೆಟ್ ಮಂಡಿಸುತ್ತಿರುವ ಅಧಿವೇಶನದಲ್ಲಿ 30 ಕೋಟಿ ರೂ. ಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ತೊಗರಿ ಬೆಳಗಾರರ ನೆರವಿಗೆ ರಾಜ್ಯ ಸರ್ಕಾರ ಬರಬೇಕು ಎಂದು ಒತ್ತಾಯಿಸಿದರು.
ಪ್ರತಿ ಕ್ವಿಂಟಲ್ ತೊಗರಿಗೆ 12,000 ರೂ. ಗಳ ಬೆಂಬಲ ಬೆಲೆ ಕೊಡುವಂತೆ, ಪ್ರತಿ ಕ್ವಿಂಟಲ್ ತೊಗರಿಗೆ 500 ರೂ. ಗಳನ್ನು ಮುಖ್ಯಮಂತ್ರಿಗಳ ಪ್ರೊತ್ಸಾಹ ಧನ ಕೊಡುವಂತೆ, ತೊಗರಿ ಮಂಡಳಿ ಬಲವರ್ಧನೆಗೆ ಕನಿಷ್ಠ 25 ಕೋಟಿ ರೂ. ಗಳ ಅನುದಾನ ನೀಡುವಂತೆ, ತೊಗರಿ ಮಂಡಳಿ ದ್ವಿದಳ ಧಾನ್ಯ ಮಂಡಳಿಯಾಗಿದ್ದರಿಂದ ಅನುದಾನವನ್ನೂ ಹೆಚ್ಚಿಸುವಂತೆ, ತೊಗರಿ ಮಂಡಳಿಗೆ ರಾಜ್ಯ ಸರ್ಕಾರ ಅನುದಾನ ನೀಡಿ ಬಲಗೊಳಿಸುವಂತೆ, ಕಾಫಿ ಮಂಡಳಿಗೆ ತೋರುತ್ತಿರುವ ಕಾಳಜಿಯನ್ನು ತೊಗರಿ ಮಂಡಳಿಗೂ ತೋರುವಂತೆ ಆಗ್ರಹಿಸಿದ ಅವರು, ಅಂದಾಗ ಮಾತ್ರ ತೊಗರಿ ಬೆಳೆಗಾರರ ಬದುಕು ಹಸನಾಗಲು ಸಾಧ್ಯ ಎಂದರು.
ತೊಗರಿ ಮಂಡಳಿಯು ಕೆಎಂಎಫ್ ಮಾದರಿಯಂತೆ ಕೆಲಸ ಮಾಡಬೇಕು, ಕೆಎಂಎಫ್ನವರು ರೈತರಿಂದ ಹಾಲು ಖರೀದಿಸಿ ಅದರ ಉತ್ಪನ್ನಗಳನ್ನು ತಯಾರಿಸುವಂತೆ ಮಾಡುತ್ತಾರೆ ಎಂದು ಹೇಳಿದ ಅವರು, ತೊಗರಿ ಮಂಡಳಿ ರೈತರಿಂದ ತೊಗರಿ ಖರೀದಿಸಿ ಅದರ ಉತ್ಪನ್ನಗಳನ್ನು ತಯಾರಿಸಲು ಕ್ರಮ ಕೈಗೊಳ್ಳುವಂತೆ, ಕ್ಷೀರ ಭಾಗ್ಯದ ಅಡಿ ಶಾಲೆಗಳಿಗೆ ಹಾಲು ನೀಡುವಂತೆ ಅಕ್ಷರ ದಾಸೋಹ ಅಡಿ ತೊಗರಿ ಬೇಳೆ ಪೂರೈಸುವಂತೆ ಒತ್ತಾಯಿಸಿದ ಅವರು, ತೊಗರಿ ಖರೀದಿಸಿ ಬೇಳೆ ಮಾಡಿ ಮಾರಾಟ ಮಾಡಿದರೆ ಆರ್ಥಿಕ ಸಬಲೀಕರಣ ಆಗಲಿದೆ. ರೈತರಿಗೂ ಅನುಕೂಲವಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರು ಉಪಸ್ಥಿತರಿದ್ದರು.







