Kalaburagi | ಕೇಂದ್ರೀಯ ವಿದ್ಯಾಲಯದಲ್ಲಿ ಬ್ಯಾಗ್‌ಲೆಸ್ ಡೇ: ವಿದ್ಯಾರ್ಥಿಗಳಿಗೆ ಕೌಶಲ್ಯಾಧಾರಿತ ತರಬೇತಿ

ಕಲಬುರಗಿ: ಪಿ.ಎಂ. ಶ್ರೀ ಕೇಂದ್ರೀಯ ವಿದ್ಯಾಲಯದಲ್ಲಿ ಬ್ಯಾಗ್‌ಲೆಸ್ ಡೇ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಕೌಶಲ್ಯಾಧಾರಿತ ಹಾಗೂ ಅನುಭವಾತ್ಮಕ ಕಲಿಕಾ ಚಟುವಟಿಕೆಗಳನ್ನು ಗುರುವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಅನಿತಾ ದೇವಾಪುರ ಅವರು ವಿದ್ಯಾರ್ಥಿಗಳಿಗೆ ಭರತನಾಟ್ಯ ತರಬೇತಿ ನೀಡಿದರು. ಲಕ್ಷ್ಮಿ ದೊಡ್ಮನಿ ಅವರು ಕೇಕ್ ತಯಾರಿಕೆಯ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರೆ, ನಾಗರಾಜ್ ಮತ್ತು ಇಂದೂಬಾಯಿ ಅವರು ಹೊಲಿಗೆ ಹಾಗೂ ಉಡುಪು ತಯಾರಿಕೆ ಕುರಿತು ಪ್ರಾಯೋಗಿಕ ತರಬೇತಿ ನೀಡಿದರು.
ವಿದ್ಯಾರ್ಥಿಗಳಿಗೆ ತರಗತಿಯ ಕಲಿಕೆಯನ್ನು ಮೀರಿ ಪ್ರಾಯೋಗಿಕ ಜ್ಞಾನ ಒದಗಿಸುವುದು, ಸೃಜನಶೀಲತೆಯನ್ನು ಬೆಳೆಸುವುದು ಹಾಗೂ ಸಾಂಪ್ರದಾಯಿಕ ಕಲೆ ಮತ್ತು ವೃತ್ತಿಪರ ಕೌಶಲ್ಯಗಳ ಪರಿಚಯ ಮಾಡಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು. ಇಂತಹ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಸ್ವಾವಲಂಬನೆ, ಆತ್ಮವಿಶ್ವಾಸ ಹಾಗೂ ವಿವಿಧ ವೃತ್ತಿಗಳ ಬಗ್ಗೆ ಆಸಕ್ತಿ ಬೆಳೆಸಲು ಸಹಕಾರಿಯಾಗುತ್ತವೆ.
ವಿದ್ಯಾರ್ಥಿಗಳು ವಿವಿಧ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಈ ಸಂದರ್ಭದಲ್ಲಿ ಪ್ರಾಂಶುಪಾಲ ಭೂಪೇಂದ್ರ ಬುರಾಡಿಯಾ, ನಾಗರಾಜ್, ವೃತ್ತಿಪರ ಶಿಕ್ಷಣದ ಉಸ್ತುವಾರಿ ಶಿಕ್ಷಕಿ ಚಂದ್ರಾ, ಆರ್.ಎನ್. ಪೊದ್ದಾರ್ ಹಾಗೂ ಅರ್ಪಿತ್ ಉಪಸ್ಥಿತರಿದ್ದರು.




