ಕಲಬುರಗಿ | ಮೈಕ್ರೋ ಫೈನಾನ್ಸ್ ಬಂದ್ ಮಾಡಿ, ಹಣದ ಮೂಲದ ತನಿಖೆ ಕೈಗೊಳ್ಳಲು ಆಗ್ರಹ

ಕಲಬುರಗಿ : ಮೈಕ್ರೋಫೈನಾನ್ಸ್ನವರ ಕಿರುಕುಳ ತಡೆಯಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸರ್ಕಾರವು ಸುಗ್ರೀವಾಜ್ಞೆಯನ್ನು ಹೊರಡಿಸಿದ್ದು ಸ್ವಾಗತಾರ್ಹ. ಆದಾಗ್ಯೂ, ಸಾಲಗಾರರಿಗೆ ಕಿರುಕುಳ ಕೊಡುವುದನ್ನು ನಿಲ್ಲಿಸಿಲ್ಲ. ಕೂಡಲೇ ರಾಜ್ಯ ಸರ್ಕಾರವು ಮೈಕ್ರೋ ಫೈನಾನ್ಸ್ಗಳನ್ನು ಬಂದ್ ಮಾಡಿ, ಆ ಫೈನಾನ್ಸ್ಗಳ ಮೂಲವನ್ನು ಪತ್ತೆ ಹಚ್ಚಲು ತನಿಖೆ ಕೈಗೊಳ್ಳಬೇಕು ಎಂದು ಆಲ್ ಇಂಡಿಯಾ ಕೌನ್ಸಿಲ್ ಆಫ್ ಹ್ಯೂಮನ್ ರೈಡ್ಸ್ ಸಂಘಟನೆಯ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಶಬನಾ ಖಾನ್ ಅವರು ಒತ್ತಾಯಿಸಿದರು.
ನಗರದಲ್ಲಿ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ಗಳ ಕಿರುಕುಳದಿಂದಾಗಿ ಹಲವಾರು ಜನ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಯಾವುದೇ ಕಾರಣಕ್ಕೂ ಫೈನಾನ್ಸ್ಗಳು ಒತ್ತಡ ಹೇರದೆ ಸಾಲ ವಸೂಲಾತಿ ಮಾಡಿಕೊಳ್ಳಬೇಕು. ಸಂಜೆ ಹೊತ್ತು ಸಾಲಗಾರರ ಮನೆಗೆ ಹೋಗಿ ಕಿರುಕುಳ ನೀಡಬಾರದೆಂದು ಸೂಚನೆ ನೀಡಿದ್ದರೂ ಸಹ ಹಲವಾರು ಜಿಲ್ಲೆಗಳಲ್ಲಿ ಕಿರುಕುಳ ಮುಂದುವರಿದಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸೂಚನೆಯ ನಂತರವೂ ರಾಜ್ಯದ ದಾವಣಗೆರಿಯಲ್ಲಿ, ಮೈಸೂರಿನಲ್ಲಿ ಮತ್ತು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ತಲಾವೊಬ್ಬರು ಮೈಕ್ರೋ ಫೈನಾನ್ಸ್‌ಗಳ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಮತ್ತು ಹುಬ್ಬಳ್ಳಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಮೈಕ್ರೋ ಫೈನಾನ್ಸ್ಗಳು ಆರ್‌ಬಿಐ ನಿಯಮದ ಪ್ರಕಾರ ಸಾಲ ಕೊಡುವಾಗ ಭದ್ರತೆಗಾಗಿ ದಾಖಲೆ ಪಡೆಯಬೇಕು. ಆದರೆ, ಇವುಗಳು ಕೇವಲ ಆಧಾರ್ ಕಾರ್ಡ್ ಮೇಲೆಯೇ ಒಬ್ಬ ಮಹಿಳೆಗೆ 10 ಲಕ್ಷ ರೂ. ಗಳವರೆಗೂ ಸಾಲ ನೀಡುತ್ತಿವೆ. ಮನೆಗೆ ಬಂದು ಸಾಲ ಪಡೆಯುವಂತೆ ಆಸೆ ತೋರಿಸಿ ಆ ಬಳಿಕ ಶೈಕ್ಷಣಿಕ ಸಾಲ, ಮೊಬೈಲ್, ಫ್ರಿಜ್ ಸೇರಿದಂತೆ ಇತರ ವಸ್ತುಗಳ ಮೇಲೆಯೂ ಸಾಲ ಪಡೆಯಬಹುದೆಂದು ಮನವೊಲಿಸಿ ಸಾಲ ನೀಡಿ ಹೆಚ್ಚಿನ ಬಡ್ಡಿಯೊಂದಿಗೆ ಸಾಲ ವಸೂಲಿ ಮಾಡಲು ಮನೆಗೆ ಬಂದು ಕಿರುಕುಳ ನೀಡಲಾಗುತ್ತಿದೆ ಎಂದು ಅವರು ದೂರಿದರು.
ಮೈಕ್ರೋ ಫೈನಾನ್ಸ್ಗಳ ವಿರುದ್ಧ ಈಗಾಗಲೇ ಕಲಬುರಗಿ, ಯಾದಗಿರಿ, ಸೇಡಂ, ಆಳಂದ್, ಹುಮ್ನಾಬಾದ್, ಜಮಖಂಡಿ, ಬಸವಕಲ್ಯಾಣ, ರಾಯಚೂರು ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಪ್ರತಿಭಟನೆ ಮಾಡಲಾಗಿದೆ. ಕಳೆದ ಮೂರು ತಿಂಗಳಿನಿಂದ ಹೋರಾಟಗಳು ನಡೆಯುತ್ತಲೇ ಇವೆ. ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಜಿಲ್ಲಾಧಿಕಾರಿಗಳಿಗೆ ಮತ್ತು ಈಶಾನ್ಯ ವಲಯ ಪೋಲಿಸ್ ಮಹಾನಿರೀಕ್ಷಕರಿಗೆ ಮನವಿ ಸಲ್ಲಿಸಲಾಗಿದೆ. ಕೂಡಲೇ ಕಿರುಕುಳದ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಮೈಕ್ರೋ ಫೈನಾನ್ಸ್ಗಳು ಪ್ರತಿ ತಾಲೂಕಿಗೆ ಕನಿಷ್ಠ 1.50 ಕೋಟಿ ರೂ. ಗಳವರೆಗೆ ಸಾಲ ನೀಡುತ್ತಿವೆ. ಆ ಹಣ ಎಲ್ಲಿಂದ ಬರುತ್ತಿದೆ ಎಂಬುದು ತನಿಖೆ ಮಾಡಬೇಕು ಮತ್ತು ಕಿರುಕುಳ ನೀಡದೆ ಕಾಲಾವಕಾಶ ನೀಡಿ ಸಾಲ ವಸೂಲಿ ಮಾಡಬೇಕು. ಕಿರುಕುಳ ನೀಡದೆ ಅರ್ಬಿಐನ ನಿಯಮ ಪಾಲನೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮೈಕ್ರೋಫೈನಾನ್ಸ್ಗಳ ಕಿರುಕುಳಕ್ಕೆ ಒಳಗಾದ ಸಂತ್ರಸ್ತರಾದ ಫರಹಾನಾ ಬೇಗಂ, ಕೌಸರ್ ಬೇಗಂ, ನಸೀಮಾ ಬೇಗಂ, ಅಲ್ತಾಮಶ ಬೇಗಂ, ಕಲಾವತಿ ಮುಂತಾದವರು ಉಪಸ್ಥಿತರಿದ್ದರು.







