Kalaburagi | ಅಕಾಲಿಕ ಮಳೆ-ಬಿರುಗಾಳಿಗೆ ಬಾಳೆ ಬೆಳೆ ಹಾನಿ : ಪರಿಹಾರಕ್ಕೆ ರೈತರ ಆಗ್ರಹ

ಕಲಬುರಗಿ : ಅಕಾಲಿಕ ಮಳೆ ಹಾಗೂ ಭಾರಿ ಬಿರುಗಾಳಿಯಿಂದ ಚಿಂಚೋಳಿ ತಾಲ್ಲೂಕಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಕೃಷಿ ಬೆಳೆಗಳು ಮತ್ತು ಮನೆಗಳಿಗೆ ವ್ಯಾಪಕ ಹಾನಿಯಾಗಿದೆ.
ತಾಲ್ಲೂಕಿನ ದೇಗಲಮಡಿ ಗ್ರಾಮದಲ್ಲಿ ಸಾವಿರಾರು ಬಾಳೆ ಗಿಡಗಳು ಧರೆಗುರುಳಿದ್ದು, ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ರೈತ ಸೋಮಶೇಖರ ಗೌಡನೂರು ಅವರಿಗೆ ಸೇರಿದ ಸುಮಾರು 3,500 ಬಾಳೆ ಗಿಡಗಳು ಹಾಗೂ ರಾಜೇಂದ್ರ ಬೀರಪ್ಪ ಅವರಿಗೆ ಸೇರಿದ 4,000ಕ್ಕೂ ಹೆಚ್ಚು ಗಿಡಗಳು ಸಂಪೂರ್ಣ ಹಾನಿಗೊಳಗಾಗಿವೆ.
ಗ್ರಾಮದ ಐದಾರು ರೈತರ ತೋಟಗಳಲ್ಲಿ ಬಾಳೆ ಬೆಳೆ ದೊಡ್ಡ ಪ್ರಮಾಣದಲ್ಲಿ ನೆಲಕಚ್ಚಿದ್ದು, ಸುಮಾರು 12 ಎಕರೆ ಪ್ರದೇಶದ ಬೆಳೆ ಸಂಪೂರ್ಣ ಹಾನಿಗೀಡಾಗಿದೆ. ಇನ್ನೂ ಹಲವೆಡೆ ಭಾಗಶಃ ಹಾನಿಯೂ ಸಂಭವಿಸಿದೆ ಎಂದು ರೈತರು ತಿಳಿಸಿದ್ದಾರೆ.
ಬೆಳೆ ಕಟಾವಿನ ನಿರೀಕ್ಷೆಯಲ್ಲಿದ್ದ ಸಂದರ್ಭದಲ್ಲಿ ಅಕಾಲಿಕ ಮಳೆಯಿಂದ ರೈತರಿಗೆ ತೀವ್ರ ಆರ್ಥಿಕ ನಷ್ಟ ಉಂಟಾಗಿದೆ. ಸರ್ಕಾರ ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
Next Story




