ತೊಗರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಆಗ್ರಹಿಸಿ ಕಲಬುರಗಿ ಬಂದ್: ಬೆಳ್ಳಂಬೆಳಗ್ಗೆ ಉತ್ತಮ ಪ್ರತಿಕ್ರಿಯೆ

ಕಲಬುರಗಿ: ತೊಗರಿಗೆ ಬೆಂಬಲ ಬೆಲೆ, ಹಾನಿಯಾಗಿರುವ ಈ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಸಂಯುಕ್ತ ಹೋರಾಟ ಕರ್ನಾಟಕ ಸಮಿತಿ ಕರೆ ನೀಡಿದ್ದ ಕಲಬುರಗಿ ಬಂದ್ ಗೆ ಬೆಳ್ಳಂಬೆಳಗ್ಗೆ ಉತ್ತಮ ಪ್ರತಿಕ್ರಿಯೆ ದೊರಕಿದೆ.
ನಸುಕಿನ ಜಾವದಲ್ಲಿ ಪ್ರತಿಭಟನೆಗೆ ಇಳಿದ ರೈತ ಮುಖಂಡರು, ಈ ವರ್ಷ ತೊಗರಿ ಬೆಳೆಗಾರರಿಗೆ ತುಂಬಾ ನಷ್ಟವಾಗಿದೆ, ಕೂಡಲೇ ರೈತರ ಸಮಸ್ಯೆಗಳನ್ನು ಈಡೇರಿಸಬೇಕು, ಬೆಳೆ ಹಾನಿ ಅನುಭವಿಸಿದ ಸಾವಿರಾರು ರೈತರು ಬೀದಿ ಪಾಲಾಗಿದ್ದಾರೆ. ಅವರ ನೆರವಿಗೆ ನಿಂತು ಸರಕಾರ ಪರಿಹಾರವಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಘೋಷಣೆಗಳನ್ನು ಹಾಕಿದರು.
ಕಲಬುರಗಿ ಬಂದ್ ಘೋಷಣೆ ನಿಮಿತ್ತ ಇಂದು ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಗಳು ರಸ್ತೆಗೆ ಇಳಿದಿಲ್ಲ, ಇದರಿಂದ ಕೇಂದ್ರ ಬಸ್ ನಿಲ್ದಾಣವು ಬಸ್ ಗಳಿಲ್ಲದೆ ಬಿಕೋ ಎನ್ನುತ್ತಿವೆ.
ಸ್ವಯಂ ಪ್ರೇರಿತ ಅಂಗಡಿ ಮುಗ್ಗಟ್ಟುಗಳು ಬಂದ್:
ಬಂದ್ ಘೋಷಣೆ ಮಾಡಿದ್ದರಿಂದ ಇಲ್ಲಿನ ಅಂಗಡಿ ಮಾಲೀಕರು ಸ್ವಯಂ ಪ್ರೇರಿತವಾಗಿ ತಮ್ಮ ಅಂಗಡಿ, ಮುಗ್ಗಟ್ಟುಗಳನ್ನು ಮುಚ್ಚಿ, ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ದಿನನಿತ್ಯ ಕೇಂದ್ರ ಬಸ್ ನಿಲ್ದಾಣದಲ್ಲಿ ದಿನಾಲೂ ಬೆಳಗ್ಗೆ ತೆರೆಯುತ್ತಿದ್ದ ಕಿರಾಣಿ ಅಂಗಡಿ, ಚಪ್ಪಲಿ ಅಂಗಡಿ, ಹೋಟೆಲ್ ಸೇರಿದಂತೆ ಇತರ ವಾಣಿಜ್ಯ ಮಳಿಗೆಗಳು ಮುಚ್ಛಿರುವುದು ಕಂಡು ಬಂತು.
ಬಂದ್ ಕರೆಗೆ ಹಲವು ಸಂಘಟನೆಗಳ ಭಾರೀ ಬೆಂಬಲ:
ತೊಗರಿಗೆ ವಿಶೇಷ ಪ್ಯಾಕೇಜ್ ಅನುದಾನ ಘೋಷಿಸಬೇಕೆಂದು ಒತ್ತಾಯಿಸಿ ಕರೆ ಕೊಟ್ಟಿದ್ದ ಕಲಬುರಗಿ ಬಂದ್ ಗೆ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಭಾರತ ಕಿಸಾನ್ ಸಭಾ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೈನ್ಯ ಕೊಡಿಹಳ್ಳಿ ಚಂದ್ರಶೇಖರ ಬಣ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೈನ್ಯ ಕೆ ಎಸ್ ಪುಟ್ಟಣ್ಣಯ್ಯಾ ಬಣ, ಸೆಂಟ್ರಲ್ ಆಫ್ ಇಂಡಿಯಾ ಟ್ರೇಡ್ ಯೂನಿಯನ್ CITU,ದಲಿತ ಸಂಘರ್ಷ ಸಮಿತಿ ಡಾ.ಅಂಬೇಡ್ಕರ್ ವಾದಿ DSS, ದಲಿತ ಸಂಘರ್ಷ ಸಮಿತಿ DSS ಮಾವಳ್ಳಿ ಶಂಕರ್ ಬಣ, ಕಟ್ಟಡ ಕಾರ್ಮಿಕ ಸಂಘಗಳ CWFI, ತೊಗರಿ ಬೆಳೆಗಾರರ ಸಂಘ, ಆಹಾರ ಧಾನ್ಯಗಳ ಮತ್ತು ಬಿಜ ವ್ಯಾಪಾರಿಗಳ ಸಂಘಗಳು, ಚೆಂಬರ್ ಆಫ್ ಕಾಮರ್ಸ್ HKCCI, ಅಡತ್ ವ್ಯಾಪಾರಸ್ಥರು ಮಾಲಿಕರು ಸಂಘ, ಕಿರಾಣಾ ಬಜಾರ್ ವ್ಯಾಪಾರಸ್ಥರು ಸಂಘ, ಬಿದಿ ಬದಿ ವ್ಯಾಪಾರಸ್ಥರು, ದಾಲ್ ಮಿಲ್ಲರ್ ಅಸೊಶಿಯೇಶನ್ ಸಂಘ, ಅಕ್ಕಿ ವ್ಯಾಪಾರಸ್ಥರು ಸಂಘ, ಔಷಧಿ ವ್ಯಾಪಾರಸ್ಥರು ಸಂಘ ಸೇರಿದಂತೆ ಇನ್ನೂ ಹಲವು ಸಂಘಟನೆಗಳು ಸಹ ಬಂದ್ ಗೆ ಬೆಂಬಲ ವ್ಯಕ್ತಪಡಿಸಿವೆ.
ಬೆಳoಬೆಳಗ್ಗೆಯಿಂದ ನಡೆದಿರುವ ಪ್ರತಿಭಟನೆಯಲ್ಲಿ ಶರಣಬಸಪ್ಪ ಮಮಶೆಟ್ಟಿ, ಭೀಮಾಶಂಕರ ಮಾಡಿಯಾಳ, ಎಸ್.ಆರ್.ಕಲ್ಲೂರ್, ಅರ್ಜುನ್ ಗೊಬ್ಬೂರ್, ಮುಬೀನ್ ಅಹ್ಮದ್, ದಿಲೀಪ್ ನಾಗೋರೆ, ಬಾಬು ಹೂವಿನಹಳ್ಳಿ, ಮಹಾಂತೇಶ್ ಜಮಾದಾರ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದಾರೆ.














