Kalaburagi| ತೂಕದಲ್ಲಿ ವ್ಯತ್ಯಾಸ, ಬಂದೂಕವಾಲಾ ವೇ ಬ್ರಿಡ್ಜ್ ಸೀಝ್

ಕಲಬುರಗಿ, ನ.3: ವೇ ಬ್ರಿಡ್ಜ್ ತೂಕದಲ್ಲಿನ ವ್ಯತ್ಯಾಸದ ದೂರಿನ ಹಿನ್ನೆಲೆಯಲ್ಲಿ ಕಲಬುರಗಿ ನಗರದ ಕಪನೂರ ಪ್ರದೇಶದಲ್ಲಿರುವ ಬಂದೂಕವಾಲಾ ವೇ ಬ್ರಿಡ್ಜ್ ಮೇಲೆ ಕಾನೂನು ಮಾಪನಶಾಸ್ತ್ರ ಅಧಿನಿಯಮ-2009ರ ಪ್ರಕಾರ ಮೊಕದ್ದಮೆ ಹೂಡಿ ವೇ- ಬ್ರೀಡ್ಜ್ ಸೀಝ್ ಮಾಡಲಾಗಿದೆ.
ಗುಲಬರ್ಗಾ ಲಾರಿ ಮಾಲಕರ ಸಂಘ (ರಿ), ಕಲಬುರಗಿ ರವರ ದೂರಿನ ಮೇರೆಗೆ ಕಾನೂನು ಮಾಪನ ಇಲಾಖೆಯ ಅಧಿಕಾರಿಗಳು ಸೋಮವಾರ ವಾಹನವೊಂದನ್ನು ಕೇಂದ್ರ ಉಗ್ರಾಣ ಸಂಸ್ಥೆ ಕಲಬುರಗಿಯಲ್ಲಿ ಟೆಸ್ಟ್ ವೇಟ್ ಸಹಾಯದಿಂದ ತೂಕ ಮಾಡಿಸಿ, ಬಳಿಕ ಅದೇ ವಾಹನವನ್ನು ಮೆ.ಬಂದೂಕವಾಲಾ ವೇಯಿಂಗ್ ಸರ್ವೀಸ್ ವೇ-ಬ್ರೀಡ್ಜ್ ನಲ್ಲಿ ತೂಕ ಮಾಡಿಸುವ ಮೂಲಕ ಸ್ಥಳ ಪರಿಶೀಲನೆ ಮಾಡಿದರು. ಈ ವೇಳೆ ತೂಕದಲ್ಲಿ 80-100 ಕೆ.ಜಿ. ವ್ಯತ್ಯಾಸ ಕಂಡು ಬಂದಿದ್ದ ಹಿನ್ನೆಲೆಯಲ್ಲಿ ಸದರಿ ವೇ-ಬ್ರಿಡ್ಜ್ ಜಪ್ತಿ ಮಾಡಲಾಗಿದೆ ಎಂದು ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರು ಗ್ರೇಡ್-1ನ ರಫೀಕಸಾಬ ಲಾಡಜಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗುಲಬರ್ಗಾ ಲಾರಿ ಮಾಲಕರ ಸಂಘ (ರಿ) ಗುಲಬರ್ಗಾ ಅಧ್ಯಕ್ಷ ಮುಹಮ್ಮದ್ ಮೊಯಿನುದ್ದೀನ್, ಕಾರ್ಯದರ್ಶಿ ವಿ.ಆರ್ ಸ್ವಾಮಿ ಹಾಗೂ ಇತರ ಸದಸ್ಯರು ಮತ್ತು ವೇ-ಬ್ರೀಡ್ಜ್ ಮಾಲಕ ಅಯ್ಯೂಬ್ ಬಂದೂಕವಾಲಾ ಉಪಸ್ಥಿತರಿದ್ದರು.




